ಪ್ರತಿಭಾ ಕಾರಂಜಿ ಮೂಲಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ

ವಿರಾಜಪೇಟೆ: ವಿದ್ಯಾರ್ಥಿಗಳ ಪ್ರತಿಭೆಯನ್ನು ಹೆಚ್ಚಿಸುವ ಉದ್ದೇಶದಿಂದ ಸರಕಾರ ಪ್ರತಿಭಾ ಕಾರಂಜಿಯಂತಹ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ವಿದ್ಯಾರ್ಥಿಗಳಿಗೆ ಹೆಚ್ಚು ಪ್ರೋತ್ಸಾಹ ನೀಡಿದಂತಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಹೇಳಿದರು.

ವಿರಾಜಪೇಟೆ ಸಮೀಪದ ಹೆಗ್ಗಳ ರಾಮನಗರದ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ‘ಕಲ್ತೋಡು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಹೇಶ್ ಗಣಪತಿ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ಹಿಂದಿನ ದಿನದಲ್ಲಿ ವಿದ್ಯೆ ಕಲಿಯಲು ಇಷ್ಟು ಸೌಕರ್ಯಗಳಿರಲಿಲ್ಲ ದೂರದ ಊರಿಂದ ನಡೆದು ಶಾಲೆಗೆ ಬರಬೇಕಾಗಿತ್ತು ಆದರೆ ಈಗ ಎಲ್ಲಾ ಸೌಕರ್ಯಗಳಿದ್ದು, ಶಿಕ್ಷಣಕ್ಕೆ ಮಹಾತ್ವ ನೀಡಲಾಗಿದ್ದು, ಸರಕಾರ ನೀಡಿರುವ ಯೋಜನೆಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿಯೂ ಭಾಗವಹಿಸುವಂತಾಗಬೇಕು ಎಂದು ಹಾರೈಸಿದರು.

ಬೇಟೋಳಿ ಗ್ರಾಪಂ ಅಧ್ಯಕ್ಷೆ ಚೋಂದಮ್ಮ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಸಿಗುವಂತಹ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಜೀವನದಲ್ಲಿ ಗುರಿಮುಟ್ಟುವಂತಾಗಬೇಕು ಎಂದರು. ವೇದಿಕೆಯಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ವಿಶ್ವನಾಥ್, ಶಿಕ್ಷಣ ಇಲಾಖೆಯ ಸಿ.ಆರ್.ಪಿ.ವೆಂಕಟೇಶ್, ಜೀವನ್, ವಿಶಾಲಾಕ್ಷಿ, ಅಜೀತಾ ಮುಂತಾದವರು ಉಪಸ್ಥಿತರಿದ್ದರು. ಶಿಕ್ಷಣ ಇಲಾಖೆಯ ನೋಡಲ್ ಅಧಿಕಾರಿ ಗೀತಾಂಜಲಿ ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಎಂ.ಜೆ. ದಮಯಂತಿ ಸ್ವಾಗತಿಸಿದರು. ಬೇಟೋಳಿ ಶಾಲಾ ಶಿಕ್ಷಕಿ ಹೆಚ್.ಜಿ. ಸೀತಮ್ಮ ವಂದಿಸಿದರು. ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಕ್ಲಸ್ಟರ್‍ನ 24 ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.