ಚಾಮುಂಡಿಬೆಟ್ಟದಲ್ಲಿ ನೂರು ಗಿಡ ನೆಟ್ಟು ಪರಿಸರ ಸಂರಕ್ಷಣೆ ಸಂದೇಶ

ಮೈಸೂರು: ವಿಶ್ವ ಭೂಮಿ ದಿನಾಚರಣೆ ಅಂಗವಾಗಿ ನಮ್ಮ ಮೈಸೂರು ಫೌಂಡೆಷನ್ ಹಾಗೂ ಐಸಿಐಸಿಐ ಬ್ಯಾಂಕ್ ಸ್ಕಿಲ್ ಡೆವಲಪ್‍ಮೆಂಟ್ ಸಂಸ್ಥೆ ಜಂಟಿ ಆಶ್ರಯ ದಲ್ಲಿ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ನೂರು ಗಿಡಗಳನ್ನು ನೆಡಲಾಯಿತು.

ಗಿಡ ನೆಡುವ ಕಾರ್ಯಕ್ಕೆ ಚಾಲನೆ ನೀಡಿದ ಮಾಜಿ ಶಾಸಕ ಎಂ.ಕೆ.ಸೋಮ ಶೇಖರ್, ಗಿಡ-ಮರ, ಪ್ರಾಣಿ-ಪಕ್ಷಿ ಸಂಕುಲ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಈ ನಿಟ್ಟಿನಲ್ಲಿ ಇಂದು ಗಿಡಗಳನ್ನು ನೆಡುವ ಕಾರ್ಯಕ್ರಮ ಏರ್ಪಡಿಸಿರುವುದು ಉತ್ತಮ ಕಾರ್ಯ. ಜೊತೆಗೆ ಎರಡೂ ಸಂಘಟನೆಗಳು ಚಾಮುಂಡಿಬೆಟ್ಟದಲ್ಲಿ ಗಿಡ-ಮರ ಹಾಗೂ ಪ್ರಾಣಿ-ಪಕ್ಷಿ ಸಂಕುಲಕ್ಕೆ ಬೇಸಿಗೆಯಲ್ಲಿ ನೀರುಣಿಸುವ ಕಾರ್ಯಕ್ರಮ ನಡೆಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿ ದರು. ಮಾಜಿ ಮೇಯರ್ ಶ್ರೀಕಂಠಯ್ಯ, ಫೌಂಡೇಷನ್ ಅಧ್ಯಕ್ಷ ದಶರಥ್, ಕಾರ್ಯಕರ್ತ ರಾದ ಮಲ್ಲೇಶ್, ಮಹೇಶ್ ಸೇರಿದಂತೆ ನೂರಾರು ಸ್ವಯಂ ಸೇವಕರು ಪಾಲ್ಗೊಂಡಿದ್ದರು.