ರಾಜ್ಯದ ಎಲ್ಲಾ ಪ್ರವಾಸಿ ತಾಣಗಳಲ್ಲಿ ಯೋಗ ತರಬೇತಿ ಕೇಂದ್ರ ಸ್ಥಾಪನೆ: ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ವಿವರಣೆ

ಮೈಸೂರು: ಭಾರತೀಯ ಪರಂಪರೆ ಹಾಗೂ ಸಂಸ್ಕøತಿಯ ಧ್ಯೋತಕವಾದ ಯೋಗವನ್ನು ಎಲ್ಲೆಡೆ ಪಸರಿಸುವುದಕ್ಕಾಗಿ ರಾಜ್ಯದ ಎಲ್ಲಾ ಪ್ರವಾಸಿ ತಾಣಗಳಲ್ಲಿಯೂ ಯೋಗ ತರಬೇತಿ ಕೇಂದ್ರವನ್ನು ಸ್ಥಾಪಿಸಲಾಗುತ್ತದೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ತಿಳಿಸಿದ್ದಾರೆ.

ಮೈಸೂರಿನ ರೇಸ್‍ಕೋರ್ಸ್ ಆವರಣದಲ್ಲಿ ಗುರುವಾರ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪ್ರದಾನಿ ನರೇಂದ್ರ ಮೋದಿ ಅಂತರಾಷ್ಟ್ರೀಯ ಮಟ್ಟದಲ್ಲಿ ಆರೋಗ್ಯ ಸುಧಾರಿಸುವುದಕ್ಕಾಗಿ ಜೂ.21ರಂದು ವಿಶ್ವ ಯೋಗ ದಿನವೆಂದು ಆಚರಿಸುವುದಕ್ಕೆ ಶ್ರಮಿಸಿದ್ದಾರೆ. ಭಾರತೀಯ ಪರಂಪರೆ ಹಾಗೂ ಸಂಸ್ಕøತಿಯ ಪ್ರತೀಕವೂ ಆಗಿರುವ ಯೋಗಾಭ್ಯಾಸ ಮಾಡುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ. ಪ್ರತಿದಿನ ನಾವು ಇನ್ನೊಬ್ಬರಿಗಾಗಿಯೇ ಕೆಲಸ ಮಾಡುತ್ತೇವೆ. ಒತ್ತಡ ಹಾಗೂ ಯಾಂತ್ರೀಕರಣದ ಬದುಕಿನಿಂದಾಗಿ ಆರೋಗ್ಯ ಸಮಸ್ಯೆಗಳು ಉಲ್ಬಣಿಸುವ ಸಾಧ್ಯತೆಯಿದೆ. ರೋಗ ಬಂದಾಗ ಕೊರಗದೆ, ರೋಗ ಬರುವುದನ್ನು ಮುನ್ನವೇ ತಡೆಯುವುದಕ್ಕಾಗಿ ಯೋಗಾಭ್ಯಾಸ ಮಾಡುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ರಾಜ್ಯದ ಎಲ್ಲಾ ಪ್ರವಾಸಿತಾಣಗಳಲ್ಲಿಯೂ ಯೋಗ ತರಬೇತಿ ಕೇಂದ್ರವನ್ನು ಸ್ಥಾಪಿಸಲಾಗುತ್ತದೆ. ಆ ಮೂಲಕ ಪ್ರವಾಸಿ ತಾಣಗಳಿಗೆ ದೇಶ, ವಿದೇಶಗಳಿಂದ ಬರುವ ಪ್ರವಾಸಿಗರಿಗೆ ಯೋಗದ ಬಗ್ಗೆ ಮಾಹಿತಿ ನೀಡುವುದರೊಂದಿಗೆ ತರಬೇತಿ ನೀಡಲಾಗುತ್ತದೆ ಎಂದು ಹೇಳಿದರು.

ಇಂದು ನಡೆದ ಯೋಗ ಕಾರ್ಯಕ್ರಮಕ್ಕೆ ತಮ್ಮ ಇಲಾಖೆಯಿಂದ 20 ಲಕ್ಷಕ್ಕೂ ಹೆಚ್ಚು ಆರ್ಥಿಕ ನೆರವು ನೀಡಿ, ಆ ಮೂಲಕ ಯೋಗಪಟುಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಮುಂದಿನ ವರ್ಷವೂ ಯೋಗ ದಿನವನ್ನು ಇನ್ನಷ್ಟು ಅದ್ದೂರಿಯಾಗಿ ನಡೆಸಲಾಗುತ್ತದೆ ಎಂದರು.

ಇನ್ನೆರಡು ದಿನದಲ್ಲಿ ಖಾತೆ ಬದಲಾವಣೆ: ಇಂದು ಸಚಿವ ಜಿ.ಟಿ.ದೇವೇಗೌಡ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಗೈರು ಹಾಜರಾಗಿದ್ದಕ್ಕೆ ಪ್ರತಿಕ್ರಿಯಿಸಿದ ಸಚಿವ ಸಾ.ರಾ.ಮಹೇಶ್, ಜಿ.ಟಿ.ದೇವೇಗೌರಿಗೆ ಆರೋಗ್ಯ ಸರಿ ಇಲ್ಲ. ಬೆಂಗಳೂರಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಅವರು ಮೈಸೂರಿನಲ್ಲಿದ್ದರೆ ಇಂದು ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳುತ್ತಿದ್ದರು ಎಂದು ಹೇಳಿದ ಅವರು, ಜಿಟಿಡಿಗೆ ಬೇರೆ ಖಾತೆ ನೀಡುವುದಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಇನ್ನೆರಡು ದಿನಗಳಲ್ಲಿ ಖಾತೆ ಬದಲಾವಣೆ ಮಾಡಲಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು.