ಇವಿಎಂ, ವಿವಿ ಪ್ಯಾಟ್ ಜಾಗೃತಿ ಅವಶ್ಯ: ನ್ಯಾ. ಬಸವರಾಜ

ಚಾಮರಾಜನಗರ: ಮತದಾನದ ಪ್ರಾಮುಖ್ಯತೆ ಕುರಿತು ಜನರಲ್ಲಿ ವ್ಯಾಪಕ ವಾಗಿ ಜಾಗೃತಿ ಮೂಡಿಸುವ ಕಾರ್ಯ ಕ್ರಮಗಳು ಅತ್ಯಂತ ಅವಶ್ಯವಾಗಿವೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರಾದ ಜಿ. ಬಸವರಾಜ ಅಭಿಪ್ರಾಯಪಟ್ಟರು.

ನಗರದ ವ್ಯಾಜ್ಯ ಪೂರ್ವ ಪರ್ಯಾಯ ಪರಿಹಾರ ಕೇಂದ್ರದಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ ಮತ್ತು ಜಿಲ್ಲಾ ವಕೀಲರ ಸಂಘ ಸಹ ಯೋಗದಲ್ಲಿ ಮತದಾನದ ಬಗ್ಗೆ ಜಾಗೃತಿ ಹಾಗೂ ಮತದಾನ ಯಂತ್ರ, ವಿವಿ ಪ್ಯಾಟ್ ಪ್ರಾತ್ಯಕ್ಷಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಯಾವುದೇ ಚುನಾವಣೆ ಇರಲಿ ಮತದಾನ ಎಂಬುದು ಪವಿತ್ರ ಕಾರ್ಯವಾಗಿದೆ. ಮತದಾರರು ಚಲಾಯಿಸುವ ಮತಗಳು ಪೋಲಾಗಬಾರದು. ಸರಿಯಾದ ಕ್ರಮದಲ್ಲಿ ಮತದಾನ ಮಾಡುವ ಬಗ್ಗೆ ಅರಿವು ಹೊಂದಬೇಕು. ಈ ನಿಟ್ಟಿನಲ್ಲಿ ಚುನಾವಣಾ ಆಯೋಗ, ಜಿಲ್ಲಾಡಳಿತ ಮತದಾರರ ಜಾಗೃತಿಯೊಂದಿಗೆ ಮತದಾನ ಯಂತ್ರ, ವಿವಿ ಪ್ಯಾಟ್ ಬಳಕೆ ಕುರಿತು ಅರಿವು ಮೂಡಿಸುತ್ತಿರುವುದು ಶ್ಲಾಘನೀಯವೆಂದು ಜಿಲ್ಲಾ ನ್ಯಾಯಾಧೀಶರು ತಿಳಿಸಿದರು.

ಜಾಗೃತಿ ಕಾರ್ಯಕ್ರಮಗಳು ವ್ಯಾಪಕವಾಗಿ ನಡೆದು ಎಲ್ಲರನ್ನೂ ತಲುಪುವಂತಾಗಲಿ. ನಾಗರಿಕರಲ್ಲಿ ಮತದಾನದ ಮಹತ್ವದ ಬಗ್ಗೆ ಹೆಚ್ಚು ತಿಳಿವಳಿಕೆ ಹೊಂದುವಂತಾಗಲಿ ಎಂದು ಜಿಲ್ಲಾ ನ್ಯಾಯಾಧೀಶರು ಆಶಿಸಿದರು.

ಜಿಲ್ಲಾಧಿಕಾರಿ ಬಿ.ಬಿ ಕಾವೇರಿ ಮಾತ ನಾಡಿ, ಮುಕ್ತ, ನ್ಯಾಯಸಮ್ಮತ ಹಾಗೂ ಪಾರದರ್ಶಕ ಚುನಾವಣೆಗಾಗಿ ವಿದ್ಯು ನ್ಮಾನ ಮತಯಂತ್ರ (ಇವಿಎಂ) ಹಾಗೂ ಮತದಾರರು ಯಾವ ಅಭ್ಯರ್ಥಿಗೆ ಮತ ಚಲಾಯಿಸಿದ್ದಾರೆ ಎಂಬುದನ್ನು ಮತ ಚಲಾಯಿಸಿದ ಕೂಡಲೆ ಖಾತರಿಪಡಿಸಿ ಕೊಳ್ಳಲು ಇರುವ ವಿವಿ ಪ್ಯಾಟ್‍ನ್ನು ಬಳಕೆ ಮಾಡಲಾಗುತ್ತಿದೆ ಎಂದರು.
ಇವಿಎಂ ಹಾಗೂ ವಿವಿ ಪ್ಯಾಟ್ ಕಾರ್ಯ ನಿರ್ವಹಣೆಯು ಅತ್ಯಂತ ಸುರಕ್ಷಿತ ಹಾಗೂ ವಿಶ್ವಾಸಾರ್ಹತೆ ಹೊಂದಿದ್ದು, ಈ ಬಗ್ಗೆ ಯಾವುದೇ ಶಂಕೆ, ಗೊಂದಲಗಳು ಬೇಡ. ಅತ್ಯಂತ ಬಿಗಿ ಭದ್ರತೆಯಲ್ಲಿ ಪ್ರತಿಯೊಂದು ಹಂತದಲ್ಲೂ ರಾಜಕೀಯ ಪಕ್ಷಗಳ ಪ್ರತಿ ನಿಧಿಗಳ ಸಮ್ಮುಖದಲ್ಲಿಯೇ ಪರಿಶೀಲಿಸಿ ಇಡಲಾಗುತ್ತದೆ. ಸಾಕಷ್ಟು ಕ್ರಮಗಳೊಂದಿಗೆ ಇದರ ಬಳಕೆಗೆ ಅನುವು ಮಾಡಿಕೊಡಲಾಗು ತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಇವಿಎಂ ಹಾಗೂ ವಿವಿ ಪ್ಯಾಟ್ ಬಳಕೆಯ ಬಗ್ಗೆ ಜನರಲ್ಲಿ ವ್ಯಾಪಕವಾಗಿ ಅರಿವು ಮೂಡಿಸಲಾಗುತ್ತದೆ. ಜನರಲ್ಲಿ ಬಳಕೆಯ ಬಗ್ಗೆ ಯಾವುದೇ ಗೊಂದಲ ಮೂಡದಿ ರಲು ಎಲ್ಲೆಡೆ ಜಾಗೃತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕಾವೇರಿ ತಿಳಿಸಿದರು. ಹಿರಿಯ ಸಿವಿಲ್ ನ್ಯಾಯಾಧೀಶ ಎಂ. ರಮೇಶ್ ಮಾತನಾಡಿ, ಮತದಾನದ ಮಹತ್ವದ ಬಗ್ಗೆ ಅರಿತು ಮತದಾನ ಪ್ರಕ್ರಿಯೆ ಯಲ್ಲಿ ಪಾಲ್ಗೊಳ್ಳಬೇಕು. ವಿದ್ಯುನ್ಮಾನ ಮತಯಂತ್ರ ಹಾಗೂ ಮತದಾನ ಖಾತರಿ ಪಡಿಸುವ ವಿವಿ ಪ್ಯಾಟ್ ಬಳಕೆ ಬಗ್ಗೆ ಜಿಲ್ಲಾ ಡಳಿತದಿಂದ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳುತ್ತಿರು ವುದು ಸ್ವಾಗತಾರ್ಹವಾಗಿದ್ದು ಪ್ರತಿ ಯೊಬ್ಬರೂ ಇದರ ಪ್ರಯೋಜನ ಪಡೆಯು ವಂತಾಗಬೇಕು ಎಂದರು.

ಮಾಸ್ಟರ್ ಟ್ರೈನರ್ ಗಣೇಶ್ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಸಿಕೊಟ್ಟರು. ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಡಿ. ವಿನಯ್, ಪ್ರಧಾನ ಸಿವಿಲ್ ನ್ಯಾಯಾ ಧೀಶರಾದ ವಿ. ದೀಪಾ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಸಿ.ಜಿ. ವಿಶಾಲಾಕ್ಷಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದು ಶೇಖರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.