ಎಂಆರ್‍ಸಿ ಜಾಗದ ಗುತ್ತಿಗೆ ಅವಧಿ ವಿಸ್ತರಣೆ ಜನಾಭಿಪ್ರಾಯದಂತೆ ನಿರ್ಧಾರ

ಮೈಸೂರು,ಜ.1(ಎಂಟಿವೈ)- ಮೈಸೂರು ಪ್ರವಾಸಿ ತಾಣವೂ ಆಗಿರುವ ಹಿನ್ನೆಲೆಯಲ್ಲಿ ಮೃಗಾಲಯವನ್ನು ಬಯಲು ಮೃಗಾಲಯವಾಗಿ ಮಾರ್ಪಡಿಸುವ ಉದ್ದೇಶದಿಂದ ರೇಸ್ ಕೋರ್ಸ್ ಸ್ಥಳವನ್ನು ಬಳಸಿಕೊಳ್ಳಬೇಕೆಂಬ ಉದ್ದೇಶ ನಮ್ಮದಾಗಿತ್ತು. ಆದರೆ ಸರ್ಕಾರ ಮೈಸೂರು ರೇಸ್ ಕ್ಲಬ್‍ಗೆ 30 ವರ್ಷ ಕಾಲ ಮತ್ತೆ ಗುತ್ತಿಗೆ ಅವಧಿ ವಿಸ್ತರಣೆ ಮಾಡಿದೆ. ಮೈಸೂರಿನ ಜನಾಭಿಪ್ರಾಯ ಪಡೆದು ಈ ಗುತ್ತಿಗೆ ರದ್ದು ಮಾಡುವ ಸಾಧ್ಯತೆ ಇದೆ ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದ್ದಾರೆ.

ಮೈಸೂರಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವ ಹಿನ್ನೆಲೆಯಲ್ಲಿ ಈ ಹಿಂದಿನ ಸರ್ಕಾರದಲ್ಲಿ ಸಚಿವರಾ ಗಿದ್ದವರು, ರೇಸ್‍ಕೋರ್ಸ್ ಸ್ಥಳವನ್ನು ಮೃಗಾಲಯಕ್ಕೆ ಪಡೆದು, ಬಯಲು ಮೃಗಾಲಯವಾಗಿ ಅಭಿವೃದ್ಧಿ ಪಡಿಸುವ ಉದ್ದೇಶ ಹೊಂದಿದ್ದರು. ನಾನು ಸಹ ಈ ಭಾಗದ ಶಾಸಕನಾಗಿ ಮೃಗಾಲಯವನ್ನು ದೊಡ್ಡ ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲು ಬೆಂಬಲ ನೀಡಿದ್ದೆ. ಆದರೆ ಸರ್ಕಾರ 30 ವರ್ಷ ಗುತ್ತಿಗೆ ಅವಧಿಯನ್ನು ವಿಸ್ತರಿಸಿದೆ. ಸಾರ್ವಜನಿಕ ಉದ್ದೇಶಕ್ಕೆ ಬಳಸಿಕೊಳ್ಳಬೇಕಾದ ಸ್ಥಳವನ್ನು, ಖಾಸಗಿ ಉದ್ದೇಶಕ್ಕಾಗಿ ಲೀಸ್‍ಗೆ ನೀಡಲಾಗಿದೆ. ಇದು ಸರ್ಕಾರದ ಶಾಶ್ವತವಾದ ನಿಲು ವಾಗುವುದಿಲ್ಲ. ಮುಂದಿನ ದಿನಗಳಲ್ಲಿ ಸಾರ್ವ ಜನಿಕ ಅಭಿಪ್ರಾಯದೊಂದಿಗೆ ಕಾರ್ಯ ಕ್ರಮ ರೂಪಿಸುವಾಗ ಸರ್ಕಾರ ಗುತ್ತಿಗೆ ಅವಧಿಯನ್ನು ರದ್ದು ಮಾಡಿ, ಸಾರ್ವಜನಿಕ ಉದ್ದೇಶಕ್ಕೆ ರೇಸ್‍ಕೋರ್ಸ್ ಭೂಮಿ ನೀಡುವ ಸಾಧ್ಯತೆ ಇದೆ. ಇದಕ್ಕೆ ನಾನು ಮನವಿಯನ್ನು ಮಾಡುತ್ತೇನೆ ಎಂದರು.

ಮೈಸೂರಿನ ಸೂಯೇಜ್ ಫಾರಂಗೆ ಕಸ ಸಾಗಿಸದಂತೆ ಕ್ರಮ ಕೈಗೊಳ್ಳಲಾಗಿದೆ. ಇಲ್ಲಿನ 7 ಲಕ್ಷ ಟನ್ ಸಂಗ್ರಹವನ್ನು ಲ್ಯಾಂಡ್ ಫಿಲ್ಲಿಂಗ್ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ. ನಾಗ್ಪುರಕ್ಕೆ ಪಾಲಿಕೆ ಸದಸ್ಯರು ಅಧ್ಯಯನ ಪ್ರವಾಸ ಕೈಗೊಂಡು, ಸೂಯೇಜ್ ಫಾರಂ ಕಸ ವಿಲೇವಾರಿ ಜೊತೆಗೆ ಮೈಸೂರು ನಗರಕ್ಕೆ ಸ್ವಚ್ಛತೆಯಲ್ಲಿ ಮೊದಲ ಸ್ಥಾನ ತಂದುಕೊಡಲು ಕೈಗೊಳ್ಳಬೇಕಾದ ಕ್ರಮದ ಬಗ್ಗೆ ತಾಳಿರುವ ನಿಲುವನ್ನು ಸ್ವಾಗತಿಸುತ್ತೇನೆ ಎಂದು ತಿಳಿಸಿದರು.