ಆಧಾರ್ ಕಾರ್ಡ್ ಅಪ್‍ಡೇಟ್‍ಗೆ ನಕಲಿ ರಶೀದಿ ನೀಡಿ ಸುಲಿಗೆ

ಮೈಸೂರು,ಜ.12-ಶಾಲಾ-ಕಾಲೇಜು ದಾಖಲೆ, ರೇಷನ್ ಕಾರ್ಡ್, ಬ್ಯಾಂಕ್ ಖಾತೆ ಸೇರಿದಂತೆ ವಿವಿಧ ದಾಖಲೆಗಳಿಗೆ ಲಿಂಕ್ ಮಾಡಲು ಆಧಾರ್ ಕಾರ್ಡ್ ಅಪ್‍ಡೇಟ್ ಮಾಡಲು ಬರುವ ಗ್ರಾಮೀಣ ಜನರು ಹಾಗೂ ಅನಕ್ಷರಸ್ಥರಿಂದ ಕೆಲವು ಸೈಬರ್ ಸೆಂಟರ್‍ಗಳು ಸುಲಿಗೆ ಮಾಡುವ ಮೂಲಕ ಅಮಾ ಯಕರನ್ನು ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ.

ಮೈಸೂರಿನ ವಿಜಯನಗರದಲ್ಲಿರುವ ಆಧಾರ್ ಸೇವಾ ಕೇಂದ್ರ ಹಾಗೂ ಮೈಸೂರಿನ ವಿವಿಧೆಡೆ ಯಿರುವ ಅಟಲ್ ಜೀ ಸೇವಾ ಕೇಂದ್ರದಲ್ಲೂ ಆಧಾರ್ ಕಾರ್ಡ್ ಮಾಡಿಕೊಡುವ, ವಿಳಾಸ ಬದಲು, ಇನಿಶಿಯಲ್ ಸೇರ್ಪಡೆ, ಹೆಸರು ಬದಲು ಸೇರಿದಂತೆ ಮಾಹಿತಿ ಅಪ್‍ಡೇಟ್ ಕಾರ್ಯ ಭರದಿಂದ ಸಾಗಿದೆ.

ಈ ನಡುವೆ ಪಡಿತರ ಚೀಟಿಗೆ ಕುಟುಂಬದ ಸದ ಸ್ಯರು ಆಧಾರ್ ಕಾರ್ಡ್ ಲಿಂಕ್ ಮಾಡಲು ಗಡುವು ನೀಡಿರುವ ಹಿನ್ನೆಲೆಯಲ್ಲಿ ಮೈಸೂರು ನಗರ, ಗ್ರಾಮೀಣ ಪ್ರದೇಶದ ಜನರು ಆಧಾರ್ ಕೇಂದ್ರ ಗಳತ್ತ ಪ್ರತಿದಿನ ಎಡತಾಕುವಂತಾಗಿದೆ. ಜನರಿಗೆ ಇರುವ ತುರ್ತು ಪರಿಸ್ಥಿತಿಯನ್ನೇ ಬಂಡವಾಳವಾಗಿಸಿ ಕೊಂಡು ಕೆಲವು ಸೈಬರ್ ಸೆಂಟರ್‍ಗಳು ಅಮಾ ಯಕರನ್ನೇ ಟಾರ್ಗೆಟ್ ಮಾಡಿಕೊಂಡು ಸುಲಿಗೆ ಮಾಡುವ ಮೂಲಕ ಸುಲಭವಾಗಿ ಹಣ ಸಂಪಾ ದಿಸುವ ವಾಮ ಮಾರ್ಗ ಅನುಸರಿಸುತ್ತಿವೆ.

ನಕಲಿ ರಶೀದಿ: ಪ್ರತಿದಿನ ನೂರಾರು ಮಂದಿ ಆಧಾರ್ ಕೇಂದ್ರಗಳ ಮುಂದೆ ಸಾಲಿನಲ್ಲಿ ನಿಂತು ಕೊಂಡು ದಿನಗಟ್ಟಲೇ ಕಾಲ ಕಳೆಯಬೇಕಾದ ಅನಿ ವಾರ್ಯತೆ ಎದುರಾಗಿದೆ. ಪ್ರತಿದಿನ ಕೆಲಸ-ಕಾರ್ಯ ಬಿಟ್ಟು ದೂರದಿಂದ ಬರಲು ಜನರಿಗೆ ತೊಡಕಾ ಗುತ್ತಿದೆ. ಕೃಷಿ ಚಟುವಟಿಕೆ, ಕೊಯ್ಲು, ಒಕ್ಕಣೆ ಕಾರ್ಯ ಭರದಿಂದ ಸಾಗುತ್ತಿರುವ ನಡುವೆಯೇ ರೇಷನ್ ಕಾರ್ಡ್‍ಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಕೊನೆ ದಿನಾಂಕ ಸಮೀಪಿಸುತ್ತಿರುವುದರಿಂದ ಗ್ರಾಮೀಣ ಪ್ರದೇಶ ಜನರು ಕುಟುಂಬದ ಸದಸ್ಯ ರೊಂದಿಗೆ ಮೈಸೂರಿಗೆ ಮುಂಜಾನೆ ಬಂದು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಕೊಳ್ಳಲು ಪ್ರಯತ್ನಿ ಸುತ್ತಿದ್ದಾರೆ. ಏಕಾಏಕಿ ಸಾವಿರಾರು ಜನರು ಒಂದೇ ಬಾರಿ ಆಧಾರ್ ಸೇವಾ ಕೇಂದ್ರದ ಮುಂದೆ ಬಂದು ಜಮಾಯಿಸುತ್ತಿದ್ದ ಹಿನ್ನೆಲೆಯಲ್ಲಿ ಆನ್‍ಲೈನ್‍ನಲ್ಲಿ ನೋಂದಣಿ ಮಾಡಿಕೊಂಡು ಬರುವ ವ್ಯವಸ್ಥೆ ಮಾಡಲಾಗಿದೆ. ಈ ವ್ಯವಸ್ಥೆಯೇ ಕೆಲವು ಸೈಬರ್ ಕೇಂದ್ರಗಳಿಗೆ ಸಂಪಾದನೆಯ ದಾರಿ ಮಾಡಿಕೊಟ್ಟಿದೆ.

ಬಹುತೇಕ ಸೈಬರ್ ಕೇಂದ್ರಗಳು ಸರಿಯಾದ ಮಾರ್ಗದಲ್ಲಿ ಅರ್ಜಿಯೊಂದಕ್ಕೆ 50ರಿಂದ 100 ರೂ. ಪಡೆದು ರಶೀದಿಯನ್ನು ಅರ್ಜಿದಾರರಿಗೆ ನೀಡು ತ್ತಿವೆ. ಆದರೆ ಕೆಲವು ಸೈಬರ್ ಕೇಂದ್ರಗಳ ಮಾಲೀಕರು ವಾಮ ಮಾರ್ಗ ಅನುಸರಿಸಿ, ಅಮಾಯಕರನ್ನು ವಂಚಿಸಿ ಸುಲಿಗೆ ಮಾಡುವಲ್ಲಿ ಮುಂದಾಗಿದ್ದಾರೆ.

ಒಬ್ಬರಿಗೆ ನೀಡಿರುವ ನೈಜ ರಶೀದಿಯ ಪಿಡಿಎಫ್ ಯನ್ನು ಕಂಪ್ಯೂಟರ್‍ನಲ್ಲಿ ಕಾಪಿ ಮಾಡಿಕೊಂಡು, ಯಾರಾದರೂ ಹೊಸದಾಗಿ ಆಧಾರ್ ಅಪ್ಡೇಟ್‍ಗೆ ನೋಂದಣಿ ಮಾಡಿಕೊಡುವಂತೆ ಬಂದರೆ (ಅನಕ್ಷ ರಸ್ಥರು, ಗ್ರಾಮೀಣ ಜನರು) ಅಂತವರಿಗೆ ಸೇವ್ ಮಾಡಿಕೊಂಡಿರುವ ಪಿಡಿಎಫ್‍ನಲ್ಲಿ ಅರ್ಜಿದಾರರ ಹೆಸರು, ಮೊಬೈಲ್ ನಂಬರ್, ಆಧಾರ್ ಕಾರ್ಡ್ ನಂಬರ್ ಬದಲಿಸಿ ನಕಲಿ ರಶೀದಿಯನ್ನು ನೀಡಿ 200 ರೂ, 300 ರೂ. ಪಡೆಯುತ್ತಿದ್ದಾರೆ. ಮೈಸೂ ರಿನ ಅಗ್ರಹಾರದ ಬಸವೇಶ್ವರ ರಸ್ತೆ, ಕಲ್ಯಾಣಗಿರಿ, ಎನ್.ಆರ್.ಮೊಹಲ್ಲಾ, ನಂಜನಗೂಡಿನ ಐದಾರು ಸೈಬರ್ ಕೇಂದ್ರದಲ್ಲಿ ಈ ದೋಖಾ ನಡೆ ಯುತ್ತಿರುವುದು ಇದೀಗ ಬೆಳಕಿಗೆ ಬಂದಿದೆ.

ಕೇಂದ್ರವೊಂದರಲ್ಲಿ ಒಂದೇ ಸಮಯ, ಒಂದೇ ದಿನಾಂಕಕ್ಕೆ ಆರು ಮಂದಿಗೆ ನಕಲಿ ರಶೀದಿ ನೀಡಿ ರುವುದು ಬೆಳಕಿಗೆ ಬಂದಿದೆ. ಅವುಗಳನ್ನು ಒಂದೇ ದಿನ ವಿಜಯನಗರದ ಆಧಾರ್ ಸೇವಾ ಕೇಂದ್ರಕ್ಕೆ ತಂದು ಸಿಕ್ಕಿಬಿದ್ದಿದ್ದಾರೆ. ಕಳೆದ ತಿಂಗಳಿಂದ ನಕಲಿ ಆಟ ಹೆಚ್ಚಾಗಿದ್ದು, ಅಮಾಯಕರು ಹಣ ಕಳೆದು ಕೊಳ್ಳುತ್ತಿದ್ದಾರೆ. ನಕಲಿ ರಶೀದಿ ಹಿಡಿದು ಬಂದವ ರನ್ನು ರಶೀದಿ ಪಡೆದು ವಾಪಸ್ಸು ಕಳುಹಿಸಲಾಗು ತ್ತಿದೆ. ಅಸಲಿ ಹಾಗೂ ನಕಲಿ ರಶೀದಿಯ ಬಗ್ಗೆ ಜ್ಞಾನ ಇಲ್ಲದೇ ಇರುವವರು ಸೈಬರ್ ಕೇಂದ್ರ ವಂಚನೆ ಬಗ್ಗೆ ತಿಳಿಯದೆ ಮತ್ತೊಮ್ಮೆ ಹಣ ಪಾವತಿಸಿ, ನೋಂದಣಿ ಮಾಡಿಕೊಳ್ಳುವಂತಾಗಿದೆ.

50ಕ್ಕೂ ಹೆಚ್ಚು ನಕಲಿ ರಶೀದಿ: ವಿಜಯನಗರದ ಆಧಾರ್ ಸೇವಾ ಕೇಂದ್ರದ ವ್ಯವಸ್ಥಾಪಕ ಕರ್ನಲ್ (ನಿವೃತ್ತ) ಎನ್.ಜಿ.ಕೃಷ್ಣಪ್ರಸಾದ್ ಅವರು ಸುಮಾರು 50ಕ್ಕೂ ಹೆಚ್ಚು ನಕಲಿ ರಶೀದಿ ಸಂಗ್ರಹಿಸಿಟ್ಟಿದ್ದಾರೆ. ಅಲ್ಲದೆ ರಶೀದಿ ನೀಡಿರುವ ಕೇಂದ್ರಕ್ಕೆ ತೆರಳಿ ಮಂಗಳಾರತಿ ಮಾಡುವಂತೆ ಸಲಹೆ ನೀಡಿದ್ದಾರೆ. ಇದರಿಂದ ಕಳೆದ ಎರಡು ದಿನಗಳಿಂದ ನಕಲಿ ರಶೀದಿ ಬರುವುದು ಕಡಿಮೆಯಾಗಿದೆ.

ಒಂದೇ ಹೆಸರಿನ ಎರಡು ಹುದ್ದೆಗಳ ಗೆಜೆಟೆಡ್ ಅಧಿಕಾರಿ ಸಹಿ: ಆಧಾರ್ ಕಾರ್ಡ್‍ನಲ್ಲಿ ವಿಳಾಸ, ಜನ್ಮ ದಿನಾಂಕ, ಹೆಸರು ಬದಲು ಸೇರಿದಂತೆ ವಿವಿಧ ಮಾಹಿತಿ ಬದಲಿಸಲು ಅಗತ್ಯ ದಾಖಲೆ ಹಾಗೂ ಫಾಮ್ರ್ಯಾಟ್‍ಗೆ ಗೆಜೆಟೆಡ್ ಅಧಿಕಾರಿಯ ಸಹಿ ಮಾಡಿಕೊಂಡು ಬರುವುದು ಕಡ್ಡಾಯವಾಗಿದೆ. ಆದರೆ ಇದಕ್ಕೂ ನಕಲಿ ಗೆಜೆಟೆಡ್ ಅಧಿಕಾರಿಗಳು ಹುಟ್ಟಿಕೊಂಡಿ ದ್ದಾರೆ. ಅಗ್ರಹಾರದ ಕಚೇರಿಯಲ್ಲಿ ಮೊದಲು ವೈದ್ಯ ಎಂದು ಸಹಿ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಇದೀಗ ಮಳವಳ್ಳಿ ಸಾರ್ವಜನಿಕ ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ಎಂದು ಮೊಹರು ಹಾಕಿ ಸಹಿ ಮಾಡಿ ಕಳುಹಿಸುತ್ತಿರುವ ದಾಖಲೆಗಳ ವಿರುದ್ಧವೂ ಆಧಾರ್ ಕೇಂದ್ರದ ಸಿಬ್ಬಂದಿ ಶಂಕೆ ವ್ಯಕ್ತಪಡಿಸಿದ್ದಾರೆ. ನಕಲಿ ರಶೀದಿ ನೀಡಿರುವವರು ಹಾಗೂ ಗೆಜೆಟೆಡ್ ಅಧಿಕಾರಿ ಗಳು ನಕಲಿ ಆಗಿದ್ದರೆ ಆಧಾರ್ ನಿಯಮ 2016ರ ಅನ್ವಯ ಎರಡು ವರ್ಷ ಕಾರಾಗೃಹ ಶಿಕ್ಷೆಯಾಗುವುದು ಖಚಿತ. ಆದರೆ ವಂಚನೆಗೆ ಒಳಗಾದವರು ವಂಚಿಸಿರುವವರ ವಿರುದ್ಧ ದೂರು ನೀಡಿದರೆ ಮಾತ್ರ ಶಿಕ್ಷೆಯಾಗುತ್ತದೆ. ಆದರೆ ಆಧಾರ್ ಸೇವಾ ಕೇಂದ್ರದ ಸಿಬ್ಬಂದಿ ದೂರು ನೀಡಲು ಅವಕಾಶವಿಲ್ಲದ ಕಾರಣ ವಂಚಕರ ಜಾಲ ವಿಸ್ತರಿಸಿದೆ.

ಎಂ.ಟಿ.ಯೋಗೇಶ್ ಕುಮಾರ್