ಪವರ್‍ಗ್ರಿಡ್ ವಿರೋಧಿಸಿ ಡಿ.30ರಿಂದ ಧರಣಿಗೆ ರೈತ ಸಂಘ ನಿರ್ಧಾರ

ಮೈಸೂರು, ಡಿ.26(ಪಿಎಂ)- ಹಿರಿಯೂರಿನಿಂದ-ಮೈಸೂರಿನವರೆಗಿನ 400 ಕೆವಿ ವಿದ್ಯುತ್ ಪವರ್‍ಗ್ರಿಡ್ ಲೈನ್ ಅನ್ನು ಇಲವಾಲ ಹೋಬಳಿಯ ರೈತರ ತೋಟಗಳ ಮಾರ್ಗದ ಬದಲು ಬೇರೆ ಮಾರ್ಗದಲ್ಲಿ ತೆಗೆದುಕೊಂಡು ಹೋಗಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಡಿ.30ರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟ ಕಾಲ ಧರಣಿ ನಡೆಸಲಾಗುವುದು ಎಂದು ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಫಲವತ್ತಾದ ಭೂಮಿಯ ಮೇಲೆ ಪವರ್ ಗ್ರಿಡ್ ವಿದ್ಯುತ್ ಲೈನ್ ತೆಗೆದುಕೊಂಡು ಹೋಗುತ್ತಿದ್ದು, ಇದರಿಂದ ಬೆಳೆ ನಾಶವಾಗುವ ಜೊತೆಗೆ ಅಲ್ಲಿ ಉತ್ತಮ ಬೆಳೆ ಬೆಳೆಯಲು ಸಾಧ್ಯವಾಗುವುದಿಲ್ಲ. ಈ ಹಿಂದೆ ಹೆಚ್ಚು ತೊಂದರೆಯಾಗದ ಮಾರ್ಗ ಗುರುತಿಸಲಾಗಿತ್ತು. ಆದರೆ ಪ್ರಭಾವಿಗಳು, ರಿಯಲ್ ಎಸ್ಟೇಟ್ ಮತ್ತು ಡೆವಲಪರ್ಸ್‍ಗಳ ಪ್ರಭಾವದಿಂದ ಮಾರ್ಗ ಬದಲಿಸಿ ರೈತರ ತೋಟಗಳ ಮಧ್ಯೆ ಹಾದು ಹೋಗುವಂತೆ ಮಾರ್ಗ ರೂಪಿಸಲಾಗಿದೆ ಎಂದು ಆರೋಪಿಸಿದರು. ಈ ಸಂಬಂಧ ಸಂಸದರಿಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಅವರು ಡಿಸಿ ಕಚೇರಿಯಲ್ಲಿ ಸಭೆ ನಡೆಸಿದ್ದರು. ಈ ವೇಳೆ ಹಿರಿಯ ಅಧಿಕಾರಿಗಳ ಜೊತೆ ಯಲ್ಲಿ ಸ್ಥಳ ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದರು. ಆದರೆ ಪವರ್‍ಗ್ರಿಡ್‍ನವರು ಪೊಲೀ ಸರ ರಕ್ಷಣೆ ಪಡೆದು ರೈತರ ತೋಟಗಳ ಮೇಲೆಯೇ ವಿದ್ಯುತ್ ಮಾರ್ಗ ನಿರ್ಮಿಸಲು ಅಳತೆ ಕಾರ್ಯ ಮುಂದುವರೆಸಿದ್ದಾರೆ. ಯಾವುದೇ ಕಾರಣಕ್ಕೂ ಇದಕ್ಕೆ ನಾವು ಅವಕಾಶ ನೀಡು ವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪದಾಧಿಕಾರಿಗಳಾದ ಪಿ.ಮರಂಕಯ್ಯ, ಆನಂ ದೂರು ಪ್ರಭಾಕರ್, ನಾಗನಹಳ್ಳಿ ಚಂದ್ರಶೇಖರ್, ಮಂಡಕಳ್ಳಿ ಮಹೇಶ್ ಗೋಷ್ಠಿಯಲ್ಲಿದ್ದರು.