ಮೈಸೂರು,ಜು.15(ಎಸ್‍ಬಿಡಿ)-ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಕಬ್ಬು ಬೆಳೆಗಾರರನ್ನು ವಂಚಿಸುತ್ತಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಈ ಬಗ್ಗೆ ಪರಿಶೀಲನೆ ನಡೆಸಲು ತಜ್ಞರನ್ನು ನಿಯೋಜಿ ಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಮೈಸೂರು ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸೋಮ ವಾರ ನಡೆದ ಜಿಲ್ಲಾ ಮಟ್ಟದ ರೈತರ ಸಭೆಯಲ್ಲಿ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯಿಂದ ಕಬ್ಬು ಬೆಳೆಗಾರರಿಗೆ ಅನ್ಯಾಯವಾಗುತ್ತಿದೆ. ಕಬ್ಬು ತೂಕದಲ್ಲಿ ಮಹಾಮೋಸ ವಾಗುತ್ತಿದೆ. 300ಕ್ಕೂ ಹೆಚ್ಚು ಲಾರಿಗಳು ಸರತಿಯಲ್ಲಿ ನಿಲ್ಲಿಸಿ ಕೊಳ್ಳಲಾಗುತ್ತದೆ. ಲಾರಿ ಕಾರ್ಖಾನೆಯ ಮುಖ್ಯದ್ವಾರ ಪ್ರವೇಶಿ ಸುತ್ತಿದ್ದಂತೆ ತೂಕ ಮಾಡುವುದಿಲ್ಲ. ಇದರಿಂದ ಕ್ರಷರ್‍ಗೆ ಇಳಿಸುವಷ್ಟರಲ್ಲಿ ಎರಡು-ಮೂರು ದಿನ ಕಳೆಯುತ್ತದೆ. ತೂಕ ಹಾಕುವವರೆಗೂ ಅಲ್ಲಿಯೇ ಕಾದುಕುಳಿತುಕೊಳ್ಳ ಬೇಕು.
ಇಳುವರಿ ಆಧಾರದಲ್ಲಿ ದರ ನಿಗದಿ ವ್ಯವಸ್ಥೆ ಬಂದಾಗಿ ನಿಂದಲೂ ರೈತರಿಗೆ ಅನ್ಯಾಯವಾಗುತ್ತಿದೆ. ವರ್ಷ ಕಳೆದಂತೆ ಇಳುವರಿ ಪ್ರಮಾಣವನ್ನು ಕಡಿಮೆ ತೋರಿಸಲಾಗುತ್ತಿದೆ. ಸ್ಥಳೀಯ ಕಬ್ಬು ಬೆಳೆಗಾರರಿಗೆ ಆದ್ಯತೆ ನೀಡುತ್ತಿಲ್ಲ. ಕಾರ್ಖಾನೆಯಲ್ಲಿ ಕಬ್ಬು ಹಾಗೂ ಸಕ್ಕರೆ ತೂಕ ಮಾಡಲು ಪ್ರತ್ಯೇಕ ವೇಬ್ರಿಡ್ಜ್ ಇಡಲಾಗಿದೆ. ಕಬ್ಬು ತೂಕ ಮಾಡುವ ಮಾಪನದ ಬಗ್ಗೆ ಅನುಮಾನವಿದೆ. ಖಾಸಗಿ ವೇಬ್ರಿಡ್ಜ್‍ನಲ್ಲಿ ತೂಕ ಮಾಡಿಸಲೂ ಸಾಧ್ಯವಿಲ್ಲ. ಹೇಗೋ ವಿಷಯ ತಿಳಿದು ಕೊಂಡು ಆ ಲಾರಿ ಮತ್ತೊಮ್ಮೆ ಕಾರ್ಖಾನೆ ಪ್ರವೇಶಿಸದಂತೆ ಮಾಡುತ್ತಿದ್ದಾರೆ ಎಂದು ರೈತರು ಆರೋಪಿಸಿದರು.
ಅನೇಕ ತಾಂತ್ರಿಕ ಗೊಂದಲಗಳಿಂದ ರೈತರಿಗೆ ಅನ್ಯಾಯ ವಾಗುತ್ತಿದೆ. ಹಾಗಾಗಿ ಕಬ್ಬನ್ನು ಕಟಾವು ಮಾಡುವ ಮೊದಲೇ ಇಳುವರಿಯನ್ನು ವೈಜ್ಞಾನಿಕ ವಿಧಾನದಲ್ಲಿ ಪರೀಕ್ಷಿಸಬೇಕು. ಕಟಾವು ಮಾಡುವ ಜವಾಬ್ದಾರಿಯನ್ನು ಕಾರ್ಖಾನೆಗೆ ವಹಿಸಬೇಕು. ನೀರಿಲ್ಲದೆ ಕಬ್ಬು ಒಣಗುತ್ತಿದೆ. ಬೋರ್ ವೆಲ್‍ಗಳೂ ಬತ್ತಿ ಹೋಗಿವೆ. ಆದ್ದರಿಂದ ಕಾರ್ಖಾನೆಯನ್ನು ಬೇಗ ಆರಂಭಿಸಲು ಸೂಚಿಸಬೇಕೆಂದು ರೈತರು ಜಿಲ್ಲಾಧಿ ಕಾರಿಗಳನ್ನು ಒತ್ತಾಯಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಈ ಹಿಂದೆಯೇ ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ತಂಡ ನಿಯೋಜಿಸಿ, ಕಾರ್ಖಾನೆಯಲ್ಲಿ ಪರಿಶೀಲಿಸಲಾಗಿತ್ತು.
ಆದರೆ ಅವರು ಋಣಾತ್ಮಕ ವಾದ ಯಾವುದೇ ಮಾಹಿತಿ ನೀಡಿಲ್ಲ ಎಂದರು. ಆದರೂ ರೈತರು ತಮ್ಮ ವಾದವನ್ನು ಸಮರ್ಥಿಸಿಕೊಂಡಿ ದ್ದರಿಂದ ಶುಗರ್ ಇನ್ಸ್‍ಟಿಟ್ಯೂಟ್‍ನ ಯಾರಾದರೂ ತಜ್ಞರ ನಿಯೋಜಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ತೂಕ, ರಿಕವರಿ, ಸಾಗಣೆ, ಇಳುವರಿ ಹೀಗೆ ಎಲ್ಲಾ ವಿಷಯಗಳ ಬಗ್ಗೆಯೂ ತಜ್ಞರಿಂದ ಪರಿಶೀಲನೆ ಮಾಡಿಸಿ, ಅವರು ನೀಡುವ ಸಲಹೆ ಮೇರೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ರೈತರಿಗೆ ಭರವಸೆ ನೀಡಿದರು. ಅಲ್ಲದೆ ಕಬ್ಬು ತುಂಬಿದ 10 ಲಾರಿಗಳನ್ನು ಖಾಸಗಿ ವೇಬ್ರಿಡ್ಜ್‍ನಲ್ಲಿ ತೂಕ ಹಾಕಿಸಿ, ನಂತರ ಕಾರ್ಖಾನೆ ವೇಬ್ರಿಡ್ಜ್‍ನಲ್ಲಿ ತೂಕಕ್ಕೆ ತುಲನೆ ಮಾಡಿ, ವ್ಯತ್ಯಾಸ ಕಂಡುಬಂದರೆ ಕ್ರಮ ಕೈಗೊಳ್ಳಲು ನಂಜನಗೂಡು ತಹಶೀಲ್ದಾರ್ ಹಾಗೂ ಆರ್‍ಟಿಓ ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು.
ಕೆರೆಗೆ ನೀರು ತುಂಬಿಸಿ: ಜಲಾಶಯಗಳ ನೀರಿನ ಮಟ್ಟ ಹಾಗೂ ಒಳಹರಿವು ಕಳೆದ ವರ್ಷಕ್ಕಿಂತ ಕಡಿಮೆ ಇದೆ. ನಾಲೆಗೆ ನೀರು ಹರಿಸುವ ಸಂಬಂಧ ಕಾವೇರಿ ನಿರ್ವಹಣಾ ಮಂಡಳಿಯಿಂದ ಸೂಚನೆ ಬಂದ ನಂತರ ಕ್ರಮ ಕೈಗೊಳ್ಳ ಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು. ಈ ಹೇಳಿಕೆ ಯನ್ನು ವಿರೋಧಿಸಿದ ರೈತರು, ಕೆಲವೇ ಮಂದಿ ಕೈಗಾರಿ ಕೋದ್ಯಮಿಗಳ ಹಿತಕ್ಕೆ ನೀರು ಹರಿಸಲು ನಿಮಗೆ ಯಾವುದೇ ಪ್ರಾಧಿಕಾರ ಅಡ್ಡಿ ಬರುವುದಿಲ್ಲ. ಆದರೆ ರೈತರ ವಿಚಾರ ದಲ್ಲಿ ಇವೆಲ್ಲಾ ಅನ್ವಯಿಸುತ್ತವೆ. ಕಾರ್ಖಾನೆಗಳಿಲ್ಲದೆ ಬದುಕ ಬಹುದು. ಅನ್ನವಿಲ್ಲದೆ ಬದುಕಲು ಸಾಧ್ಯವೇ?. ಮೊದಲು ರೈತರನ್ನು ರಕ್ಷಿಸಿ ಎಂದು ಆಗ್ರಹಿಸಿದರು. ನಾಲೆಗಳಿಗೆ ಕಾಂಕ್ರಿಟ್ ಹಾಕಿ, ಭೂಮಿಗೆ ನೀರು ಇಳಿಯದಂತೆ ಮಾಡಿದ್ದಾರೆ. ಅಂತರ್ಜಲ ಕುಸಿಯಲು ಇದೂ ಒಂದು ಕಾರಣ. ಕಬಿನಿ, ಹಾರಂಗಿ ಜಲಾಶಯಗಳಲ್ಲಿ ನೀರಿನ ಮಟ್ಟ ಹೆಚ್ಚಿದ ಕೂಡಲೇ ಕೆರೆಗಳಿಗೆ ನೀರು ತುಂಬಿಸಿ ಎಂದು ಒತ್ತಾಯಿಸಿದರು. ಈ ವೇಳೆ ಡಿಸಿ ಅಭಿರಾಮ್ ಅವರು ಮಾತನಾಡಿ, ಅಂತರ್ಜಲ ವೃದ್ಧಿ ಹಾಗೂ ಜಾನುವಾರುಗಳಿಗೆ ನೀರು ಒದಗಿಸುವ ನಿಟ್ಟಿನಲ್ಲಿ ಕೆರೆಗಳಿಗೆ ನೀರು ತುಂಬಿಸುವುದು ಬಹಳ ಮುಖ್ಯ. ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕೆಂದು ಸೂಚಿಸಿದರು.