ಬೇಸಾಯದ ಜೊತೆಗೆ ಉಪಕಸುಬು ಅಳವಡಿಸಿಕೊಳ್ಳಿ

ಕೆ.ಆರ್.ಪೇಟೆ:  ರೈತ ಬಾಂಧವರು ಬೇಸಾಯದ ಜೊತೆಗೆ ಉಪ ಕಸುಬುಗಳನ್ನು ರೂಢಿಸಿಕೊಳ್ಳುವ ಮೂಲಕ ಆರ್ಥಿಕ ಸಂಕಷ್ಟದಿಂದ ಪಾರಾಗಬಹುದು ಎಂದು ಶಾಸಕ ಡಾ.ಕೆ.ಸಿ.ನಾರಾಯಣಗೌಡ ಸಲಹೆ ನೀಡಿದರು.

ತಾಲೂಕಿನ ಹೇಮಗಿರಿ ಶ್ರೀ ಆದಿಚುಂಚನಗಿರಿ ಶಾಖಾ ಮಠದ ಜಮೀನಿನಲ್ಲಿ ಹಮ್ಮಿ ಕೊಂಡಿದ್ದ ಭತ್ತ ನಾಟಿ ಕಾರ್ಯಕ್ರಮದಲ್ಲಿ ಭೂಮಿ ತಾಯಿಗೆ ಪೂಜೆ ಸಲ್ಲಿಸಿ, ರೈತರು ಹಾಗೂ ನಾಟಿ ಹಾಕುವ ಮಹಿಳೆಯರೊಂದಿಗೆ ಕೆಸರು ಗದ್ದೆಯಲ್ಲಿ ಪಂಚೆ ತೊಟ್ಟು ಸುಮಾರು 1 ಗಂಟೆ ಕಾಲ ಭತ್ತದ ಪೈರುಗಳನ್ನು ನಾಟಿ ಮಾಡಿ ನಂತರ ನೆರೆದಿದ್ದ ರೈತರನ್ನು ಉದ್ದೇಶಿಸಿ ಅವರು ಮಾತನಾಡಿದರು.

ರೈತರು ಬೇಸಾಯದ ಜೊತೆಗೆ ಉಪ ಕಸುಬುಗಳಾದ ಹೈನುಗಾರಿಕೆ, ಕುರಿ, ಕೋಳಿ, ಮೇಕೆ, ಮೊಲ, ಹಂದಿ ಸಾಕಣೆ ಮಾಡುವುದರಿಂದ ಹೆಚ್ಚಿನ ಆದಾಯ ಗಳಿಸಬಹುದು. ಇದರಿಂದ ಮಳೆ ಕೊರತೆಯಾಗಿ ಬೇಸಾಯದಲ್ಲಿ ನಷ್ಟವಾದರೇ ರೈತರು ತಮ್ಮ ಆರ್ಥಿಕ ಪರಿಸ್ಥಿತಿ ಸರಿದೂ ಗಿಸಿಕೊಳ್ಳಬಹುದು ಎಂದರು.

ರೈತರು ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ದಲ್ಲಾಳಿಗಳು ಬೆಲೆ ನಿಗದಿ ಮಾಡಿ ಹೆಚ್ಚಿನ ಲಾಭಗಳಿಸುತ್ತಿದ್ದಾರೆ. ಇದನ್ನು ತಪ್ಪಿಸುವ ಮೂಲಕ ಸರ್ಕಾರ ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಬೇಕು. ಯುವಕರು ಲಾಭದಾಯಕವಲ್ಲ ಎಂದು ಕೃಷಿಯಿಂದ ವಿಮುಖರಾಗುತ್ತಿರುವುದು ಸರಿಯಲ್ಲ. ರೈತರು ಕಡಿಮೆ ಅವಧಿಯಲ್ಲಿ ಹೆಚ್ಚು ಆದಾಯ ಗಳಿಸುವ ತರಕಾರಿ, ಸೊಪ್ಪು, ಹೂವಿನ ಬೆಳೆ ಗಳನ್ನು ಬೆಳೆದು ಲಾಭ ಗಳಿಸಬೇಕು. ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಹೆಚ್ಚಿನ ಆದಾಯ ಗಳಿಸಬಹುದು ಎಂದರು.

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕೃಷಿಯಿಂದ ವಿಮುಖವಾಗುತ್ತಿರುವ ರೈತರನ್ನು ಮತ್ತೆ ಕೃಷಿಯತ್ತ ಆಕರ್ಷಿಸುವ ಉದ್ದೇಶದಿಂದ ಪಾಂಡವಪುರ ತಾಲೂಕಿನ ಸೀತಾಪುರದಲ್ಲಿ ನಾಟಿ ಕಾರ್ಯ ಹಮ್ಮಿಕೊಂಡಿದ್ದರು. ಇದರಿಂದ ಹಳ್ಳಿ ತೊರೆದು ಬೆಂಗಳೂರಿನಲ್ಲಿ ನೆಲೆಸಿದ್ದ ಸಾವಿರಾರು ಮಂದಿ ಮತ್ತೆ ಹಳ್ಳಿಗೆ ತೆರಳಿ ಬೇಸಾಯ ಮಾಡಲು ಆರಂಭಿಸಿರುವುದು ಶ್ಲಾಘನೀಯ ಎಂದರು.

ತಾಲೂಕಿನ ಸಾವಿರಾರು ಯುವಕರು ಬಂಗಾರದಂತಹ ಕೃಷಿ ಭೂಮಿಯನ್ನು ಪಾಳು ಬಿಟ್ಟು ಬೆಂಗಳೂರು, ಮುಂಬೈನಲ್ಲಿ ನೆಲೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಆದಿಚುಂಚನಗಿರಿ ಹೇಮಗಿರಿ ಶಾಖಾ ಮಠದ ಕಾರ್ಯದರ್ಶಿ ಡಾ.ಜಿ.ಎನ್.ರಾಮಕೃಷ್ಣೇ ಗೌಡರ ವಿಶೇಷ ಆಸಕ್ತಿಯಿಂದ ತಾವೂ ಸಹ ಮಠದ ಭತ್ತದ ಗದ್ದೆಯಲ್ಲಿ ನಾಟಿ ಕಾರ್ಯ ಮಾಡುವ ಮೂಲಕ ಯುವಕರನ್ನು ಕೃಷಿಯತ್ತ ಆಕರ್ಷಿ ಸುವ ಪ್ರಾಮಾಣಿಕ ಪ್ರಯತ್ನ ಮಾಡಿ ದ್ದೇವೆ. ಭೂಮಿ ತಾಯಿ ಯನ್ನು ನಂಬಿದ ವರು ಎಂದಿಗೂ ಕೆಡುವುದಿಲ್ಲ. ಹೀಗಾಗಿ ಎಲ್ಲಾ ರೈತರು ಹಾಗೂ ಯುವಕರು ಬೇಸಾಯ ಮಾಡುವ ಮೂಲಕ ಉತ್ತಮ ಆದಾಯ ಗಳಿಸಬೇಕು ಎಂದು ಮನವಿ ಮಾಡಿದರು.

ಸುಮಾರು 40 ವರ್ಷಗಳ ಹಿಂದೆ ನಾವು ಚಿಕ್ಕವರಾಗಿದ್ದಾಗ ನಮ್ಮ ಗ್ರಾಮದ ಹೊಲ, ಗದ್ದೆಗಳಲ್ಲಿ ಕೃಷಿ ಚುಟುವಟಿಕೆಯಲ್ಲಿ ತೊಡ ಗುತ್ತಿದ್ದೆವು. ಉದ್ಯಮಿಯಾಗಿ, ರಾಜಕಾರಣಿಯಾಗಿದ್ದರೂ ನಾನು ಕೃಷಿಯನ್ನು ಎಂದಿಗೂ ಮರೆತಿಲ್ಲ. ಇಂದು ನಾಟಿ ಕಾರ್ಯದಲ್ಲಿ ಭಾಗವಹಿಸಿ ರೈತರೊಂದಿಗೆ ಸಂವಾದ ನಡೆಸಿ ರುವುದು ನನಗೆ ಹೆಚ್ಚು ಸಂತೋಷವನ್ನುಂಟು ಮಾಡಿದೆ. ಮುಂದೆಯೂ ಬೇರೆ ಬೇರೆ ಹೋಬಳಿಗಳಲ್ಲಿ ನಾಟಿ ಕಾರ್ಯ ನಡೆಸಿ ಯುವಕರಿಗೆ ಪ್ರೋತ್ಸಾಹ ತುಂಬುವ ಕೆಲಸ ಮಾಡುವುದಾಗಿ ತಿಳಿಸಿದರು.

ಹೇಮಗಿರಿ ಶಾಖಾ ಮಠದ ಕಾರ್ಯ ದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ, ಜಿಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಟಿ.ಮಂಜು, ತಾಪಂ ಉಪಾ ಧ್ಯಕ್ಷ ಎ.ಎನ್.ಜಾನಕೀರಾಂ, ಸ್ಥಾಯಿ ಸಮಿತಿ ಅಧ್ಯಕ್ಷ ರಾಜು, ಸದಸ್ಯ ನಿಂಗೇಗೌಡ, ಪುರ ಸಭಾ ಸದಸ್ಯರಾದ ಹೇಮಂತ್‍ಕುಮಾರ್, ದಿನೇಶ್, ನಾಗರಾಜು, ಮುಖಂಡರಾದ ಜಗದೀಶ್, ಕುಮಾರ್, ಹನುಮಂತು, ಕೆ.ಎಸ್. ಹರಿಪ್ರಸಾದ್, ಸ್ವಾಮಣ್ಣ, ಕೆ.ಸಚಿನ್‍ಕೃಷ್ಣ, ಪ್ರಸಾದ್, ಹುಚ್ಚೇಗೌಡ ಸೇರಿದಂತೆ ಆದಿ ಚುಂಚನಗಿರಿ ಹೇಮಗಿರಿ ಶಾಖಾ ಮಠದ ಶಿಕ್ಷಕರು ಮತ್ತು ಸಿಬ್ಬಂದಿಗಳಿದ್ದರು.