ರೈತರ ಸಾಲ ಮನ್ನಾ: ಪ್ರಧಾನಿ ಮೋದಿ ಹೇಳಿಕೆ ದುರದೃಷ್ಟಕರ

ಬೆಂಗಳೂರು: ರಾಜ್ಯದ ರೈತರ ಸಾಲ ಮನ್ನಾ ಯೋಜನೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಹೇಳಿಕೆ ಸರಿ ಇಲ್ಲ. ಅದು ಸೂಕ್ಷ್ಮ ವಲ್ಲದ ಮತ್ತು ದುರದೃಷ್ಟಕರ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಇಂದು ಟ್ವೀಟ್ ಮಾಡಿ ರುವ ಸಿಎಂ, ಸಾಲ ಮನ್ನಾ ಕುರಿತು ಪ್ರಧಾನಿ ನರೇಂದ್ರ ಮೋದಿ ದಾರಿ ತಪ್ಪಿಸುವ ಹೇಳಿಕೆ ನೀಡುತ್ತಿದ್ದಾರೆ. ಅವರ ಹೇಳಿಕೆಯು ಸಂಪೂರ್ಣ ತಪ್ಪಾದ,ಸೂಕ್ಷ್ಮವಲ್ಲದ ಮತ್ತು ದುರದೃಷ್ಟಕರ ಎಂದಿದ್ದಾರೆ. ಸಾಲಮನ್ನಾ ಯೋಜನೆಯ ಬಗ್ಗೆ ಸಂಪೂರ್ಣ ಸತ್ಯವನ್ನು ಅರಿಯದೆ ದೇಶದ ಜನರನ್ನು ಮೋದಿಯವರು ತಪ್ಪು ದಾರಿಗೆ ಎಳೆಯುತ್ತಿರುವುದು ದುಃಖದ ವಿಚಾರ ಎಂದು ಸಿಎಂ ಹೇಳಿದ್ದಾರೆ.

ಮಾನ್ಯ ಪ್ರಧಾನ ಮಂತ್ರಿಗಳೇ ಹೇಳಿಕೆಯನ್ನು ನೀಡುವ ಮುನ್ನ ಯೋಜನೆಯ ಸತ್ಯಾಸತ್ಯತೆಯನ್ನು ಅರಿತುಕೊಳ್ಳಿ. ಬೆಳೆ ಸಾಲಮನ್ನಾವು ಪಾರದರ್ಶಕವಾಗಿದ್ದು, ಇತರೆ ರಾಜ್ಯಗಳಿಗೆ ಹೋಲಿಸಿ ದರೆ ಇಲ್ಲಿ ಆನ್‍ಲೈನ್‍ನಲ್ಲಿಯೇ ಮಾಹಿತಿ ಲಭ್ಯವಿದೆ. ರಾಜ್ಯದ ಪ್ರತಿಯೊಬ್ಬರ ತೆರಿಗೆ ಹಣವನ್ನು ವ್ಯವಸ್ಥಿತವಾಗಿ ರೈತರ ಕೈಸೇರುವಂತೆ ನೋಡಿಕೊಳ್ಳಲಾಗುತ್ತಿದೆ. ಪ್ರತಿ ರೈತನು ಕೂಡ ಇದರ ಲಾಭವನ್ನು ಪಡೆಯುತ್ತಾನೆ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ರೈತರ ಸಾಲಮನ್ನಾ ಯೋಜನೆ ‘ಅಪಹಾಸ್ಯ’ ಎಂದು ಲೇವಡಿ ಮಾಡಿದ್ದ ಪ್ರಧಾನಿ ಮೋದಿ, ರೈತರ ಸಾಲ ಮನ್ನಾ ಘೋಷಣೆ ರೈತರ ಬಗ್ಗೆ ಮಾಡಿದ ಅತ್ಯಂತ ಕ್ರೂರ ಜೋಕ್ ಎಂದು ಟೀಕಿಸಿದ್ದರು.