ಎಕ್ಸಿಸ್ ಬ್ಯಾಂಕ್ ವಿರುದ್ಧ ರೈತರ ಪ್ರತಿಭಟನೆ

ಮಡಿಕೇರಿ: ಸರಕಾರದ ಆದೇಶವನ್ನು ಮೀರಿ ಬೆಳೆಗಾಂನ ರೈತರಿಗೆ ಸಾಲ ವಸೂಲಿಯ ನೋಟಿಸ್ ನೀಡಿ ಬಂಧಿಸಲು ಒತ್ತಡ ಹೇರಿರುವ ಕೋಲ್ಕತ್ತ ಎಕ್ಸಿಸ್ ಬ್ಯಾಂಕ್‍ನ ಕ್ರಮವನ್ನು ಖಂಡಿಸಿ ಕೊಡಗು ರೈತ ಸಂಘ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು.

ನಗರದ ಎಕ್ಸಿಸ್ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಿದ ರೈತ ಸಂಘದ ಸದಸ್ಯರು ಎಕ್ಸಿಸ್ ಬ್ಯಾಂಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರಲ್ಲದೇ, ರೈತರ ನೆರವಿಗೆ ಬಾರದ ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.

ರೈತರನ್ನು ಸಾಲ ಕಟ್ಟುವಂತೆ ಪೀಡಿಸು ತ್ತಿರುವ ಎಕ್ಸಿಸ್ ಬಾಂಕನ್ನು ರಾಜ್ಯದಿಂದಲೇ ಕಿತ್ತೊಗೆಯಬೇಕು. ಬ್ಯಾಂಕ್‍ನ ಮ್ಯಾನೇಜರ್ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಲು ಮುಂದಾಗದ ಕ್ರಮಕ್ಕೆ ರೈತ ಸಂಘದ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಯಾವುದೇ ರೈತ ಆತ್ಮಹತ್ಯೆಗೆ ಶರಣಾದರೆ ಎಕ್ಸಿಸ್ ಬ್ಯಾಂಕ್ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದ ಪ್ರತಿಭಟನಾಕಾರರು ಬ್ಯಾಂಕ್‍ನ್ನು ಬಂದ್ ಮಾಡುವಂತೆ ಪಟ್ಟು ಹಿಡಿದರು.

ಮಡಿಕೇರಿ ಎಕ್ಸಿಸ್ ಬ್ಯಾಂಕ್‍ನ ಮ್ಯಾನೇಜರ್ ಮಾತನಾಡಿ, ಪ್ರತಿಭಟನೆಯ ಮನವಿ ಪತ್ರವನ್ನು ಕೋಲ್ಕತ್ತ ಕೇಂದ್ರ ಕಚೇರಿಗೆ ಕಳುಹಿಸಿ ನೋಟಿಸ್ ಹಿಂಪಡೆಯುವಂತೆ ಶಿಫಾರಸು ಮಾಡುವುದಾಗಿ ಭರವಸೆ ನೀಡಿದರು. ಆ ಬಳಿಕ ಪ್ರತಿಭಟನೆಯನ್ನು ಕೈ ಬಿಡಲಾಯಿತು. ಈ ಸಂದರ್ಭ ರೈತ ಸಂಘದ ಕಾನೂನು ಸಲಹೆಗಾರ ವಕೀಲ ಹೇಮಚಂದ್ರ, ಪ್ರಮುಖರಾದ ಸುಜಯ್ ಬೋಪಯ್ಯ, ಹರಿ ಸೋಮಯ್ಯ ರಾಜಪ್ಪ, ಅರ್ಜುನ, ಮಹೇಶ್, ಸುಭಾಷ್ ಮತ್ತಿತರರು ಹಾಜರಿದ್ದರು.