ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರ ಪ್ರತಿಭಟನೆ

ಚಾಮರಾಜನಗರ:  ರೈತರ ಎಲ್ಲಾ ರೀತಿಯ ಸಾಲಗಳನ್ನು ಮನ್ನಾ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಚಾ.ನಗರದಲ್ಲಿ ಮಂಗಳವಾರ ರೈತಸಂಘ, ಹಸಿರು ಸೇನೆ, ಕಬ್ಬು ಬೆಳೆಗಾರರ ಸಂಘ ಸೇರಿದಂತೆ ರೈತ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆಯಿತು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ರೈತ ಸಂಘಟನೆಯ, ಮುಖಂಡರು, ಪದಾಧಿ ಕಾರಿಗಳು ಹಾಗೂ ರೈತರು ಸಮಾ ವೇಶಗೊಂಡು, ಬಳಿಕ ರಾಜ್ಯ ಹಾಗೂ ಕೇಂದ್ರ ಸರ್ಕಾರ, ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗುತ್ತಾ ಅಲ್ಲಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದರು.

ಮೆರವಣಿಗೆಯು ಗುಂಡ್ಲುಪೇಟೆ ವೃತ್ತ, ದೊಡ್ಡ ಅಂಗಡಿ ಬೀದಿ, ಚಿಕ್ಕ ಅಂಗಡಿ ಬೀದಿ, ಸಂತೇಮರಹಳ್ಳಿ ವೃತ್ತ, ಭುವ ನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿ ರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತಲು ಪಿತು. ಬಳಿಕ, ಭವನದ ಆವರಣದಲ್ಲಿ ಪ್ರತಿಭಟನಾ ಧರಣಿ ನಡೆಸಿದ ರೈತರು ನಮ್ಮ ನ್ಯಾಯಯುತ ಬೇಡಿಕೆಯನ್ನು ಈಡೇ ರಿಸಬೇಕು ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಅವರು ರೈತರ ಸಾಲಮನ್ನಾ ಮಾಡುವುದಾಗಿ ಘೋಷಿಸಿದ್ದಾರೆ. ಆದರೆ, ಇದುವರೆವಿಗೂ ಸರ್ಕಾರದಿಂದ ಆದೇಶ ಹೊರಬಿದ್ದಿಲ್ಲ. ಬ್ಯಾಂಕ್‍ಗಳು ಸಾಲ ಮರು ಪಾವತಿಸುವಂತೆ ರೈತರಿಗೆ ನೋಟಿಸ್ ಹಾಗೂ ಆರೆಸ್ಟ್ ವಾರೆಂಟ್ ಜಾರಿ ಗೊಳಿಸುತ್ತಿವೆ. ಹಾಗಾಗಿ, ರೈತರು ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾರೆ. ಜಿಲ್ಲೆಯಲ್ಲಿ ನಾಲ್ವರು ರೈತರು ಆತ್ಮಹತ್ಯೆಗೆ ಶರಣಾಗಿ ದ್ದಾರೆ. ಆದರಿಂದ ರೈತರ ಎಲ್ಲಾ ಸಾಲ ಗಳನ್ನು ಈ ಕೂಡಲೇ ಮನ್ನಾ ಮಾಡಿ ಆದೇಶ ಹೊರಡಿಸಬೇಕು. ಹೊಸ ಸಾಲ ವನ್ನು ನೀಡಬೇಕು ಎಂದು ಆಗ್ರಹಿಸಿದರು.

ಕಳೆದ 3 ವರ್ಷಗಳಿಂದ ಭೀಕರ ಬರ ಗಾಲ ಆವರಿಸಿದೆ. ಇದರಿಂದ ರೈತರು ಸಂಕ ಷ್ಟಕ್ಕೆ ಸಿಲುಕಿದ್ದಾರೆ. ಅನ್ನದಾತರು ಸರಣಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದ್ದು, ರೈತರು ಬೀದಿಗೆ ಬೀಳುವ ಸ್ಥಿತಿ ಬಂದಿದೆ ಎಂದು ದೂರಿದರು.

ಸಕ್ಕರೆ ಕಾರ್ಖಾನೆಗಳು ಕಬ್ಬು ಕಟಾವು ಕೂಲಿಯನ್ನು ಹೆಚ್ಚಿಸಿದೆ. ಇದರಿಂದ ರೈತ ರಿಗೆ ಆರ್ಥಿಕವಾಗಿ ಹೊರೆ ಆಗುತ್ತಿದೆ. ಜೊತೆಗೆ ಕಬ್ಬನ್ನು ವಿಳಂಬವಾಗಿ ಕಟಾವು ಮಾಡುತ್ತಿದ್ದು, ರೈತರಿಗೆ ಅನ್ಯಾಯವಾಗು ತ್ತಿದೆ. ಕಾರ್ಖಾನೆ ಮಾಲೀಕರು ರೈತರಿಗೆ ಬಾಕಿ ಹಣ ನೀಡಲು ಮೀನಾಮೇಷ ಎಣಿ ಸುತ್ತಿದ್ದಾರೆ ಎಂದು ದೂರಿದರು.

ರೈತರ ನ್ಯಾಯಯುತ ಬೇಡಿಕೆಗಳನ್ನು ಈ ಕೂಡಲೇ ಈಡೇರಿಸಬೇಕು. ಇಲ್ಲ ದಿದ್ದಲ್ಲಿ ಜಿಲ್ಲೆಯಾದ್ಯಂತ ಹಂತ-ಹಂತ ವಾಗಿ ಉಗ್ರ ಹೋರಾಟ ರೂಪಿಸಬೇಕಾ ಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನಾ ನಿರತ ರೈತರು ಭವನದ ಮುಖ್ಯದ್ವಾರದ ಬಳಿ ಧರಣಿ ನಡೆಸಲು ಮುಂದಾದರು. ಸ್ಥಳದಲ್ಲಿದ್ದ ಭಾರೀ ಸಂಖ್ಯೆಯ ಪೊಲೀಸರು, ಬ್ಯಾರಿಕೇಡ್‍ಗಳನ್ನು ಹಾಕಿ ಇದಕ್ಕೆ ಅನುಮತಿ ನಿರಾಕರಿಸಿದರು. ನಂತರ ರೈತ ಮುಖಂಡರು, ಭವನದ ಮುಖ್ಯ ದ್ವಾರದ ಮುಂಭಾಗದಿಂದ ಉದ್ಯಾನದವ ರೆಗೆ ಒಂದು ಸುತ್ತು ಮೆರವಣಿಗೆ ತೆರಳಲು ಅವಕಾಶ ಕಲ್ಪಿಸುವಂತೆ ಒತ್ತಾಯಿಸಿದರು. ಇದಕ್ಕೆ ಪೊಲೀಸರು ಸಮ್ಮತಿ ಸೂಚಿಸಿದ ನಂತರ ರೈತರು ಭವನವನ್ನು ಒಂದು ಸುತ್ತು ಹಾಕಿ ಉದ್ಯಾನವನಕ್ಕೆ ಆಗ ಮಿಸಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿ ಸಿದ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ರೈತರ ಸಮಸ್ಯೆಗಳನ್ನು ಆಲಿಸಿದರು. ನಂತರ ಅವರ ಹಕ್ಕೋತ್ತಾಯ ಹಾಗೂ ಸಮಸ್ಯೆ ಗಳನ್ನು ಬಗೆಹರಿಸಲು ಹತ್ತು ದಿನ ದೊಳಗಾಗಿ ಜಿಲ್ಲೆಯ ಜನಪ್ರತಿನಿಧಿಗಳು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಸಕ್ಕರೆ ಕಾರ್ಖಾನೆ ಅಧಿಕಾರಿಗಳ ಸಭೆ ಕರೆದು ಚರ್ಚಿಸುವ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆಯನ್ನು ಕೈಬಿಟ್ಟರು.

ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್, ಕಬ್ಬು ಬೆಳೆಗಾರ ಸಂಘದ ಕಾರ್ಯಾ ಧ್ಯಕ್ಷ ಹಳ್ಳಿಕೆರೆಹುಂಡಿ ಭ್ಯಾಗರಾಜ್, ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಅಧ್ಯಕ್ಷ ಪಿ.ಸೋಮಶೇಖರ್, ರೈತ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಗುರು ಪ್ರಸಾದ್, ಮುಖಂಡರಾದ ಹೊನ್ನೂರು ಬಸವಣ್ಣ, ಮಡಹಳ್ಳಿ ಮಹದೇವಸ್ವಾಮಿ, ಪಟೇಲ್ ಶಿವಕುಮಾರ್, ತಂಗವೇಲು, ಚಂಗಡಿ ಕರಿಯಪ್ಪ, ಸಿದ್ದೇಶ, ಕಿರಗಸೂರು ಶಂಕರ್, ಅತ್ತಹಳ್ಳಿ ದೇವರಾಜು, ಹಾಲ ಹಳ್ಳಿ ಮಹೇಶ್, ಸಿದ್ದರಾಜು ಸೇರಿದಂತೆ ನೂರಾರು ರೈತರು, ಮಹಿಳಾ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೀತಾಪ್ರಸನ್ನ ಅವರ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಆಯೋಜಿಸಲಾಗಿತ್ತು.

ಮುತ್ತಿಗೆ: ಪ್ರತಿಭಟನೆಗೆ ಆಗಮಿಸಿದ ರೈತ ಮುಖಂಡರಿಗೆ ಹಾಗೂ ರೈತರಿಗೆ ಪ್ರವಾಸಿ ಮಂದಿರದಲ್ಲಿ ಕೊಠಡಿ ನೀಡಲು ನಿರಾ ಕರಿಸಿದ ಹಿನ್ನೆಲೆಯಲ್ಲಿ ರೈತರು ಪ್ರವಾಸಿ ಮಂದಿರದ ಪಕ್ಕದಲ್ಲಿ ಇರುವ ಪಿಡಬ್ಲ್ಯೂಡಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ನಂತರ ಅಧಿಕಾರಿ ಕೊಠಡಿ ಕೊಡಿಸುವ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಕೈಬಿಟ್ಟರು.

ರೈತರ ಹಕ್ಕೋತ್ತಾಯಗಳು…

  • ರೈತರ ಎಲ್ಲಾ ಸಾಲಗಳನ್ನು ಮನ್ನಾ ಮಾಡಬೇಕು.
  • ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆ ನಡುವೆ ದ್ವಿಪಕ್ಷೀಯ ಒಪ್ಪಂದ ಆಗಬೇಕು.
  • ಹೋಬಳಿ ಮಟ್ಟದಲ್ಲಿ ಭತ್ತ ಖರೀದಿ ಕೇಂದ್ರ ಆರಂಭಿಸಬೇಕು.
  • ಸ್ವಾಮಿನಾಥನ್ ವರದಿಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಬೇಕು.
  • ಕೃಷಿ ಪಂಪ್‍ಸೆಟ್‍ಗಳಿಗೆ 12 ಗಂಟೆ 3 ಫೇಸ್ ವಿದ್ಯುತ್ ನೀಡಬೇಕು.
  • ಕೃಷಿ ಆಯೋಗ ರಚನೆ ಮಾಡಬೇಕು.
  • ನದಿ ಮೂಲಗಳಿಂದ ಎಲ್ಲಾ ಕೆರೆ ಕಟ್ಟೆಗಳಿಗೆ ನೀರು ತುಂಬಿಸಬೇಕು.
  • ಕಾಡಂಚಿನ ಗ್ರಾಮಗಳಿಗೆ ಮೂಲಸೌಕರ್ಯ ಹಾಗೂ ಕಾಡಿನಿಂದ ಹೊರ ಬರುವ ರೈತರಿಗೆ ಪುನರ್ ವಸತಿ ಕಲ್ಪಿಸಬೇಕು.
  • ಹಾಲಿನ ದರ ಕನಿಷ್ಟ ಪ್ರತಿ ಲೀಟರ್ 30 ರೂ. ನಿಗದಿಗೊಳಿಸಬೇಕು.
  • ಎಲ್ಲಾ ಬೆಳೆಗಳಿಗೂ ಬೆಳಿ ವಿಮೆ ವಿಸ್ತರಿಸಬೇಕು.