ಕೆಆರ್‍ಎಸ್ ರೈಲು ನಿಲ್ದಾಣ – ಸಾಗರಕಟ್ಟೆ ರಸ್ತೆ ದುರಸ್ತಿಗೆ ಆಗ್ರಹಿಸಿ ರೈತರ ಪ್ರತಿಭಟನೆ

ಮೈಸೂರು: ಕೆ.ಆರ್. ಸಾಗರ ರೈಲ್ವೆ ನಿಲ್ದಾಣದಿಂದ ಸಾಗರಕಟ್ಟೆವರೆಗೆ ಇರುವ ಟರ್ಕಿ ಟ್ರಾವೆಲ್ಸ್ ರೋಡ್ ತೀರಾ ಹಾಳಾಗಿದ್ದು, ದ್ವಿಚಕ್ರ ವಾಹನಗಳು ಸಹ ಸಂಚರಿಸಲಾಗದಷ್ಟು ಅಧ್ವಾನದಿಂದ ಕೂಡಿದೆ. ಈ ರಸ್ತೆಯನ್ನು ಅಗಲೀಕರಿಸಿ, ದುರಸ್ತಿ ಗೊಳಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಸೋಮವಾರ ಮೈಸೂರು ತಾಲೂಕು ಕಚೇರಿ ಎದುರಿನ ರಾಷ್ಟ್ರೀಯ ಹೆದ್ದಾರಿ ಉಪವಿಭಾಗ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲ ಪುರ ನಾಗೇಂದ್ರ, ಮೈಸೂರು ತಾಲೂಕು ಅಧ್ಯಕ್ಷ ಪಿ.ಮರಂಕಯ್ಯ ಇನ್ನಿತರರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿ ರುವ ಈ ಹಾಳಾಗಿರುವ ರಸ್ತೆಯನ್ನು ದುರಸ್ತಿ ಪಡಿಸಬೇಕು ಎಂದು ಆಗ್ರಹಿಸಿ 2018ರ ನವೆಂಬರ್‍ನಲ್ಲಿ ಪ್ರತಿ ಭಟನೆ ನಡೆಸಲಾಗಿತ್ತು. ಆ ವೇಳೆ ಅಭಿವೃದ್ದಿ ಪಡಿಸುವ ಭರವಸೆ ನೀಡಿದ್ದ ಅಧಿಕಾರಿ ಗಳು, ಈವರೆಗೂ ಅದಕ್ಕೆ ಮುಂದಾಗಿಲ್ಲ ಎಂದು ದೂರಿದರು. ಈಗಲಾದರೂ ಅಧಿ ಕಾರಿಗಳು ಎಚ್ಚೆತ್ತು ರಸ್ತೆ ದುರಸ್ತಿಗೆ ಮುಂದಾ ಗದಿದ್ದರೆ ಅನಿರ್ಧಿಷ್ಟಾವಧಿ ಧರಣಿ, ಸ್ಥಳೀಯವಾಗಿ ವಿಶಿಷ್ಟ ರೀತಿಯ ಚಳವಳಿ ಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಎಂ.ಎಸ್.ಅಶ್ವಥ್ ನಾರಾಯಣರಾಜೇ ಅರಸ್, ಹೊಸೂರು ಕುಮಾರ್, ಹೊಸ ಕೋಟೆ ಬಸವರಾಜು, ಆನಂದೂರು ಪ್ರಭಾಕರ್, ನಾಗನಹಳ್ಳಿ ವಿಜಯೇಂದ್ರ, ಮಂಡಕಳ್ಳಿ ಮಹೇಶ್, ದಿನೇಶ್, ಚಂದ್ರ ಶೇಖರ್ ಉಪಸ್ಥಿತರಿದ್ದರು.