ಆರ್‍ಸಿಇಪಿ ಒಪ್ಪಂದ ವಿರೋಧಿಸಿ ಅ.24ರಂದು ಮೈಸೂರಲ್ಲಿ ರೈತರ ಪ್ರತಿಭಟನೆ

ಮೈಸೂರು, ಅ.20(ಆರ್‍ಕೆಬಿ)- ಕೇಂದ್ರ ಸರ್ಕಾರ ರೈತರು, ಕೈಗಾರಿಕೆಗಳ ಹಿತದೃಷ್ಟಿಗೆ ಧಕ್ಕೆ ತರಲಿರುವ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಬಾರದೆಂದು ಆಗ್ರಹಿಸಿ ಅ.24 ರಂದು ಮೈಸೂರಿನಲ್ಲಿ ಪ್ರತಿಭಟನೆ ಹಮ್ಮಿಕೊಂಡಿ ರುವುದಾಗಿ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಟಿ.ಆರ್.ವಿದ್ಯಾಸಾಗರ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿ, ಈ ಹಿಂದೆ ಚೀನಾದಿಂದ ರೇಷ್ಮೆ ಆಮದು ಮಾಡಿಕೊಂಡ ನಂತರ ದೇಶದ ರೇಷ್ಮೆ ವಲಯಕ್ಕೆ ಆದ ಹಾನಿ ರೀತಿಯಲ್ಲೇ ಈ ಮುಕ್ತ ವ್ಯಾಪಾರ ಒಪ್ಪಂದದಿಂದಲೂ ಆಗಲಿದೆ ಎಂದರು. ಇಲ್ಲಿನ ಆರ್ಥಿಕ ಸ್ವಾವಲಂಬನೆ ನಶಿಸಿ ಇತರ ರಾಷ್ಟ್ರಗಳ ಮೇಲೆ ಆಹಾರಕ್ಕಾಗಿ ಅವಲಂಬಿಸಬೇಕಾಗುತ್ತದೆ. ಜೊತೆಗೆ, ಅತಿ ಕಡಿಮೆ ಬೆಲೆಯಲ್ಲಿ ಹೈನು ಉತ್ಪನ್ನ, ಕೈಗಾರಿಕಾ ಉತ್ಪನ್ನಗಳು ಸುಂಕ ರಹಿತವಾಗಿ ಆಮದಾಗುವ ಕಾರಣ ಈ ಕ್ಷೇತ್ರಗಳನ್ನೇ ಅವಲಂಬಿಸಿದ ಇಲ್ಲಿನ ವಲಯಗಳು ಮುಚ್ಚಬೇಕಾದ ಪರಿಸ್ಥಿತಿಯುಂಟಾಗುತ್ತದೆ ಎಂಬ ಆತಂಕ ವ್ಯಕ್ತಪಡಿಸಿದರು.

ಈ ಒಪ್ಪಂದ ವಿರೋಧಿಸಿ ಅ.24 ರಂದು ಮೈಸೂರಿನ ಗನ್‍ಹೌಸ್ ಮುಂಭಾಗದಿಂದ ಡಿಸಿ ಕಚೇರಿವರೆಗೆ ಮೆರವಣಿಗೆ ಮೂಲಕ ತೆರಳಿ ಅಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು. ಅಂದು ದೇಶಾದ್ಯಂತ ರೈತ ಸಂಘಟನೆಗಳು ಪ್ರತಿಭಟನೆ ನಡೆಸಿ ಒಪ್ಪಂದದ ವಿರುದ್ಧ ಕೇಂದ್ರಕ್ಕೆ ತಮ್ಮ ಅಸಮಾಧಾನ ವ್ಯಕ್ತಪಡಿಸಲಿವೆ ಎಂದರು. ಗೋಷ್ಠಿಯಲ್ಲಿ ಹಿಮ್ಮಾವು ರಘು, ಕೆ.ಜಿ.ಶಿವಪ್ರಸಾದ್, ಸತೀಶ್, ರವಿರಾಜು, ಮಂಜುಕಿರಣ್ ಉಪಸ್ಥಿತರಿದ್ದರು.