ಮೈಸೂರು ಮೃಗಾಲಯಕ್ಕೆ ಹೆಣ್ಣು ಚಿಂಪಾಂಜಿ, ಜೋಡಿ ಸಿಂಹಗಳ ಸೇರ್ಪಡೆ

ಮೈಸೂರು, ಜೂ.27(ಆರ್‍ಕೆಬಿ)- ಮೈಸೂರಿನ ಚಾಮರಾಜೇಂದ್ರ ಮೃಗಾಲಯಕ್ಕೆ ಇದೀಗ ಸಿಂಗಾಪುರದಿಂದ ಒಂದು ಹೆಣ್ಣು ಚಿಂಪಾಂಜಿ ಮತ್ತು ಒಂದು ಜೊತೆ ಭಾರತೀಯ ಸಿಂಹಗಳು ಸೇರ್ಪಡೆ ಯಾಗಿವೆ. ಜೂ.26ರಂದು ಸಿಂಗಾಪುರದಿಂದ 14 ವರ್ಷ ವಯಸ್ಸಿನ `ರ್ಹಾ’ ಎಂಬ ಹೆಸರಿನ ಹೆಣ್ಣು ಚಿಂಪಾಂಜಿ  ಬಂದಿದ್ದರೆ, ಗುಜರಾತಿನ ಸಕ್ಕರ್‍ಬಾಗ್ ಮೃಗಾಲಯದಿಂದ ಬಂದಿದ್ದ 2 ಜೊತೆ ಭಾರತೀಯ ಸಿಂಹಗಳ ಪೈಕಿ ಒಂದು ಜೊತೆ ಸಿಂಹಗಳನ್ನು ಬೆಂಗಳೂರಿನ ಬನ್ನೇರುಘಟ್ಟ ಜೈವಿನ ಉದ್ಯಾನವನಕ್ಕೆ ಸ್ಥಳಾಂತರಿಸಲಾಗಿದೆ. ಮೃಗಾಲಯದಲ್ಲಿರುವ ಒಂಟಿ ಪ್ರಾಣಿಗಳ ಜೊತೆಗೂಡಿಸುವಿಕೆ ಹಾಗೂ ಅನುಮೋದಿತ ಪ್ರಾಣಿ ಸಂಗ್ರಹಣಾ ಯೋಜನೆಯನ್ನು ಉತ್ಕøಷ್ಟಗೊಳಿ ಸುವ ನಿಟ್ಟಿನಲ್ಲಿ ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಸಿಂಗಾಪುರದಿಂದ ಹೆಣ್ಣು ಚಿಂಪಾಂಜಿ ಇಲ್ಲಿಗೆ ಆಗಮಿಸಿದ್ದು, ಇದಕ್ಕೆ ಬದಲಿಯಾಗಿ ಮೈಸೂರು ಮೃಗಾಲಯದಿಂದ ರಾಣಿ ಎಂಬ ಹೆಸರಿನ ಒಂದು ಹೆಣ್ಣು ಸ್ಲಾತ್ ಕರಡಿಯನ್ನು ಬೆಂಗಳೂರು ಮೂಲಕ ಸಿಂಗಾಪುರ ಮೃಗಾಲಯಕ್ಕೆ ವಿಮಾನದಲ್ಲಿ ಕಳುಹಿ ಸಿಲಾಗಿದೆ ಎಂದು ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕ ಅಜೀತ ಕುಲಕರ್ಣಿ ತಿಳಿಸಿದ್ದಾರೆ. ಮೃಗಾಲಯದ ಪ್ರಾಣಿ ಸಂಗ್ರಹಕ್ಕೆ ಸೇರ್ಪಡೆಗೊಂಡ ಹೆಣ್ಣು ಚಿಂಪಾಂಜಿ ಹಾಗೂ 1 ಜೊತೆ ಭಾರತೀಯ ಸಿಂಹ ಮೃಗಾಲಯ ವೀಕ್ಷಣೆಗೆಂದು ದೇಶ ವಿದೇಶಗಳಿಂದ ಬರಲಿರುವ ವೀಕ್ಷಕರನ್ನು ಆಕರ್ಷಿಸಲಿದೆ.