ಪೇಂಟಿಂಗ್ ಮಾಡಿಸಲು  ನಿಲ್ಲಿಸಿದ್ದ ಮಿನಿಬಸ್‍ಗೆ ಬೆಂಕಿ

ಮೈಸೂರು,ಫೆ.19(ಎಸ್‍ಪಿಎನ್)-ಪೇಂಟಿಂಗ್‍ಗೆ ನಿಲ್ಲಿಸಿದ್ದ ಮಿನಿಬಸ್‍ಗೆ ಆಕಸ್ಮಿಕ ಬೆಂಕಿ ತಗುಲಿ ಹಾನಿಯಾಗಿರುವ ಘಟನೆ ಮೈಸೂರಿನ ನಾಚೇನಹಳ್ಳಿ ಪಾಳ್ಯದಲ್ಲಿ ಮಂಗಳವಾರ ತಡರಾತ್ರಿ ಸಂಭ ವಿಸಿದೆ. ಮೈಸೂರು ನಾಚೇನಹಳ್ಳಿ ಪಾಳ್ಯದ ಜೆ.ಪಿ.ನಗರ-ಗೊರೂರು ರಸ್ತೆ ಮಾರ್ಗದಲ್ಲಿ ಹುಸೇನ್ ಎಂಬುವರು ಮಿನಿಬಸ್‍ಗೆ ಪೇಂಟಿಂಗ್ ಮಾಡಲು ಬೇರೊಬ್ಬ ರಿಂದ ಸಬ್‍ಲೀಸ್ ಪಡೆದು ಪೇಂಟಿಂಗ್ ಮಾಡಲು ರಸ್ತೆ ಬದಿ ನಿಲ್ಲಿಸಿದ್ದರು. ಅರೆಬರೆ ಪೇಂಟಿಂಗ್ ಮಾಡಿದ್ದ ಬಸ್‍ಗೆ ಅಕಸ್ಮಾತ್ ಬೆಂಕಿ ತಗುಲಿದ ಬಗ್ಗೆ ಸರಸ್ವತಿಪುರಂ ಅಗ್ನಿಶಾಮಕ ದಳದ ಕಂಟ್ರೋಲ್ ರೂಂಗೆ ಸಾರ್ವಜನಿಕರೊಬ್ಬರು ತಡರಾತ್ರಿ 1.15ಕ್ಕೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದರು. ತಕ್ಷಣ ಬೆಂಕಿ ಹತ್ತಿಕೊಂಡ ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿ ಆಗಮಿಸುವಷ್ಟರಲ್ಲಿ ಗುರುತು ಸಿಗಲಾರದಷ್ಟು ಬಸ್ ಸುಟ್ಟು ಕರಕಲಾಗಿತ್ತು. ಈ ಬೆಂಕಿ, ಪಕ್ಕದಲ್ಲಿ ನಿಲ್ಲಿಸಿದ್ದ ಮತ್ತೊಂದು ಮಿನಿಬಸ್, ಜೀಪ್‍ಗೆ ವ್ಯಾಪಿ ಸುವಷ್ಟರಲ್ಲಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಲಾಗಿದೆ ಎಂದು ಅಗ್ನಿಶಾಮಕ ದಳ ಸಿಬ್ಬಂದಿ ಪಂಡಿತ್ ಆರಾಧ್ಯ `ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದರು. ಕಿಡಿ ಗೇಡಿಗಳು ರಾತ್ರಿ ವೇಳೆ ಸಿಗರೇಟ್ ಸೇದಲು ಬೆಂಕಿ ಹತ್ತಿಸಿಕೊಂಡು ರಸ್ತೆಯ ಒಣ ಹುಲ್ಲಿನ ಮೇಲೆ ಬಿಸಾಡಿದಾಗ, ಸಣ್ಣ ಪ್ರಮಾಣದಲ್ಲಿ ಹತ್ತಿಕೊಂಡು ಬಸ್‍ಗೆ ತಗುಲಿ ಮಿನಿಬಸ್‍ಗೆ ಹಾನಿಯಾಗಿರಬಹುದು. ಆದರೆ, ಈ ಪ್ರಕರಣ ಸಂಬಂಧ ಯಾವುದೇ ದೂರುಗಳು ಬಂದಿಲ್ಲ ಎಂದು ವಿದ್ಯಾರಣ್ಯಂ ಪೊಲೀಸರು `ಮೈಸೂರು ಮಿತ್ರ’ನಿಗೆ ತಿಳಿಸಿದರು.