ಆಂಗ್ಲ ಮಾಧ್ಯಮಕ್ಕೆ ವಿರೋಧ ಸೇರಿ ಐದು ನಿರ್ಣಯ ಅಂಗೀಕಾರ

ಧಾರವಾಡ: 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭಾನುವಾರ ತೆರೆ ಬಿದ್ದಿದ್ದು, ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸುವ ನಿರ್ಧಾರ ವನ್ನು ಸರ್ಕಾರ ಕೈ ಬಿಡಬೇಕು ಎಂದು ಒಕ್ಕೊರಲಿನ ನಿರ್ಣಯ ಕೈಗೊಳ್ಳಲಾಗಿದೆ.

ಮುಂದಿನ ಶೈಕ್ಷಣಿಕ ವರ್ಷದಿಂದ ಒಂದು ಸಾವಿರ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಕನ್ನಡ ಸಾಹಿತ್ಯ ಸಮ್ಮೇಳನ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಪೂರ್ವ ಪ್ರಾಥಮಿಕ ಹಂತದಿಂದ 7ನೇ ತರಗತಿ ವರೆಗಿನ ಪ್ರಾಥಮಿಕ ಶಿಕ್ಷಣವನ್ನು ರಾಷ್ಟ್ರೀ ಕರಣ ಮಾಡಬೇಕು ಎಂದು ಆಗ್ರಹಿಸಿದೆ. 84ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ.ಚಂದ್ರಶೇಖರ್ ಕಂಬಾರ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಅವರ ನೇತೃತ್ವದಲ್ಲಿ ಇಂದು ಸಂಜೆ ಬಹಿರಂಗ ಸಭೆಯಲ್ಲಿ ನಿರ್ಣಯಗಳನ್ನು ಮಂಡನೆ ಮಾಡಲಾಯ್ತು. ಈ ವೇಳೆ ಕನ್ನಡ ಸಾಹಿತ್ಯ ಪರಿಷತ್ ಗೌರವ ಕೋಶಾಧ್ಯಕ್ಷ ಪಿ.ಮಲ್ಲಿಕಾರ್ಜುನಪ್ಪ ಅವರು ಐದು ನಿರ್ಣಯಗಳನ್ನು ಮಂಡಿಸಿದರು. ಇದಕ್ಕೆ ಸಭಿಕರು ಜೈಕಾರ ಕೂಗುವ ಮೂಲಕ ಬೆಂಬಲ ಸೂಚಿಸಿದರು.

ಸಮ್ಮೇಳನದ ನಿರ್ಣಯಗಳು ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿ ಗೊಳಿಸಿದ್ದಕ್ಕೆ ಎಲ್ಲ ಸಾಹಿತ್ಯ ಆಸಕ್ತರು, ಪದಾಧಿಕಾರಿಗಳಿಗೆ ಧನ್ಯವಾದಗಳು. ನಾಡ ಗೀತೆ ಹಾಡುವ ಅವಧಿಯನ್ನು ಗರಿಷ್ಠ 2.30 ನಿಮಿಷಗಳಿಗೆ ನಿಗದಿ ಗೊಳಿಸಬೇಕು. ಬರುವ ಶೈಕ್ಷಣಿಕ ವರ್ಷದಲ್ಲಿ ರಾಜ್ಯ ಸರ್ಕಾರ 1 ಸಾವಿರ ಆಂಗ್ಲ ಶಾಲೆ ತೆರೆಯುವ ನಿರ್ಧಾರವನ್ನು ಕೈ ಬಿಡಬೇಕು. ಕೇಂದ್ರ ಸರ್ಕಾರದ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶ ಕೊಡಬೇಕು. ಎಲ್.ಕೆ.ಜಿ, ಯು.ಕೆ.ಜಿ ಸೇರಿದಂತೆ 1ರಿಂದ 7ನೇ ತರಗತಿ ವರೆಗೆ ಪ್ರಾಥಮಿಕ ಶಿಕ್ಷಣವನ್ನು ರಾಷ್ಟ್ರೀ ಕರಣಗೊಳಿಸುವುದು.