ಬಿಜೆಪಿ ಶಾಸಕರ ತಂಡದಿಂದ ಶ್ರೀರಂಗಪಟ್ಟಣದಲ್ಲಿಪ್ರವಾಹ ಪರಿಸ್ಥಿತಿ ವೀಕ್ಷಣೆ

ಮೈಸೂರು, ಆ.12 (ಆರ್‍ಕೆಬಿ)- ಕೆಆರ್‍ಎಸ್ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರು ಹೊರಬಿಟ್ಟ ಹಿನ್ನೆಲೆ ಯಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಯನ್ನು ಅವಲೋಕಿಸಲು ಶಾಸಕ ಎಸ್.ಎ. ರಾಮದಾಸ್ ಅವರ ನೇತೃತ್ವದಲ್ಲಿ ಬಿಜೆಪಿ ಶಾಸಕರು ಮತ್ತು ಇನ್ನಿತರ ಸಂಘಟನೆಗಳ ತಂಡ ಸೋಮವಾರ ಶ್ರೀರಂಗಪಟ್ಟಣ ತಾಲೂ ಕಿನ ಹಲವು ಭಾಗಗಳಿಗೆ ಭೇಟಿ ನೀಡಿತ್ತು.

ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ನಿರಂಜನಕುಮಾರ್, ಬಿಜೆಪಿ ರಾಜ್ಯ ಕಾರ್ಯದರ್ಶಿ ರಾಜೇಂದ್ರ, ಜಿಎಸ್‍ಎಸ್ ಸಂಸ್ಥಾಪಕ ಶ್ರೀಹರಿ, ಸೇಫ್ ವೀಲ್ಸ್ ಸಂಸ್ಥಾಪಕ ಬಿ.ಎಸ್.ಪ್ರಶಾಂತ್ ಅವ ರನ್ನು ಒಳಗೊಂಡ ತಂಡದೊಂದಿಗೆ ಅಧಿ ಕಾರಿಗಳು ಪ್ರವಾಹ ಪೀಡಿತ ಪ್ರದೇಶ ಗಳನ್ನು ಪರಿಶೀಲನೆ ನಡೆಸಿದರು.

ಶ್ರೀರಂಗಪಟ್ಟಣ ಭಾಗದಲ್ಲಿ ಅತಿಹೆಚ್ಚು ಮಳೆ ಬಂದ ಸಂದರ್ಭದಲ್ಲಿ ಸಮಸ್ಯೆಗಳು ಕಂಡು ಬರುತ್ತದೆ, ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ದೃಷ್ಟಿಯಿಂದ ಭೇಟಿ ನೀಡಿ ವಾಸ್ತವ ಸ್ಥಿತಿ ಅರಿತು ವರದಿ ತಯಾರಿಸಿ, ಮಂಡ್ಯ ಜಿಲ್ಲೆಗೆ ಸಂಬಂಧಿಸಿದ ಜಿಲ್ಲಾಧಿಕಾರಿ, ಎಸ್ಪಿ, ತಹಶೀಲ್ದಾರ್ ಅವರಿಂದ ಮಾಹಿತಿ ಪಡೆದು ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಅವರಿಗೆ ವರದಿ ನೀಡ ಲಾಗುವುದು ಎಂದು ಶಾಸಕ ಎಸ್.ಎ. ರಾಮದಾಸ್ ತಿಳಿಸಿದರು.

ಶ್ರೀರಂಗಪಟ್ಟಣದಲ್ಲಿರುವ ಸಂತೆಮಾಳ ಸೇರಿದಂತೆ ಪಟ್ಟಣದಲ್ಲಿ ಎಲ್ಲೆಲ್ಲಿ ಪ್ರವಾಹದ ನೀರು ಬರುತ್ತಿದೆಯೋ ಅಲ್ಲಿ ತಡೆಗೋಡೆ ಗಳನ್ನು ನಿರ್ಮಿಸುವುದು, ಪಾರಂಪರಿಕ ಪಟ್ಟಣವಾದ ಶ್ರೀರಂಗಪಟ್ಟಣದ ಪಾರಂಪರಿಕ ಸೇತುವೆ, ಕಟ್ಟಡಗಳನ್ನು ರಕ್ಷಿಸಿಕೊಳ್ಳಲು ಕ್ರಮ ವಹಿಸುವುದು. ಇತ್ಯಾದಿ ಕುರಿತು ಚಿಂತನೆ ನಡೆಸಲಾಗುವುದು ಎಂದು ಹೇಳಿದರು.