ಪ್ರವಾಹ ಸಂತ್ರಸ್ತರ ಮನೆ ನಿರ್ಮಾಣ ಶೀಘ್ರ ಪೂರ್ಣಗೊಳಿಸಲು ಸೂಚನೆ

ಹಾಸನ,ಜ.21-ಪ್ರವಾಹದಿಂದ ಹಾನಿಗೊಳಗಾದ ಸಂತ್ರಸ್ತರ ‘ಎ’ ಮತ್ತು ‘ಬಿ’ ಕೆಟಗರಿಯ ಮನೆಗಳಿಗೆ ಎರಡನೇ ಹಂತದ ಹಣ ಬಿಡುಗಡೆ ಮಾಡಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಕಂದಾಯ ಇಲಾಖೆ ವಿಪತ್ತು ನಿರ್ವಹಣೆಯ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲ್‍ಕುಮಾರ್ ಸೂಚಿಸಿದ್ದಾರೆ.

ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೊ ಸಂವಾದ ನಡೆಸಿ ಮಾತನಾಡಿದ ಅವರು, ಪ್ರವಾಹದಿಂದ ಹಾನಿಯಾದ ಮನೆಗಳ ಪುನರ್ ನಿರ್ಮಾಣ, ಮೂಲಸೌಕರ್ಯಗಳ ದುರಸ್ತಿ ಕುರಿತ ವರದಿ ಪಡೆದರಲ್ಲದೆ, ಪ್ರವಾಹದಿಂದ ಉಂಟಾದ ಬೆಳೆ ಹಾನಿಗೆ ಪರಿಹಾರ, ಸಬ್ಸಿಡಿ ಸಾಲ ಸೌಲಭ್ಯ ವಿತರಣೆ ಹಾಗೂ 2020-21 ನೇ ಸಾಲಿನಲ್ಲಿ ನಡೆಯಲಿರುವ ಜನಗಣತಿಯ ಪೂರ್ವಭಾವಿ ತಯಾರಿಯ ಕುರಿತು ಸಲಹೆ ಸೂಚನೆ ನೀಡಿದರು.

ಸಂತ್ರಸ್ತರ ಮನೆಗಳ ನಿರ್ಮಾಣ ಕಾಮಗಾರಿ ಆರಂಭವಾಗಿದ್ದು, ಈಗಾಗಲೇ ಜಿಲ್ಲೆಯಲ್ಲಿ `ಎ’ ಕೆಟಗರಿಯ 184 ಮನೆಗಳಲ್ಲಿ ಮತ್ತು `ಬಿ’ ಕೆಟಗರಿಯ 975 ಮನೆಗಳಿದ್ದು, ಅವುಗಳ ಜಿಪಿಎಸ್ ಅಪ್‍ಲೋಡ್ ಮಾಡಿ ಎರಡನೇ ಹಂತದ ಹಣ ಬಿಡುಗಡೆ ಮಾಡಿ ಕಾಮಗಾರಿಯನ್ನು ಮುಂದುವರೆಸುವಂತೆ ಅವರು ಜಿಲ್ಲಾಧಿಕಾರಿಗಳಿಗೆ ಟಿ.ಕೆ.ಅನಿಲ್‍ಕುಮಾರ್ ನಿರ್ದೇಶನ ನೀಡಿದರು.

2021ರಲ್ಲಿ ನಡೆಯಲಿರುವ ಆರ್ಥಿಕ ಜನಗಣತಿಯ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಅವರು ಅಧಿಕಾರಿಗಳಿಗೆ ತಿಳಿಸಿದರಲ್ಲದೆ, ಈ ಬಾರಿಯ ಜನಗಣತಿಯನ್ನು ಮೊಬೈಲ್ ಆ್ಯಪ್ ಮೂಲಕ ನಡೆಸುತ್ತಿದ್ದು, ಗಣತಿದಾರರಿಗೆ ಹೆಚ್ಚಿನ ಸಂಭಾವನೆ ದೊರೆಯಲಿದೆ ಎಂದು ಮಾಹಿತಿ ತಿಳಿಸಿದರು.

ವೀಡಿಯೊ ಸಂವಾದದ ನಂತರ ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಜಿಲ್ಲೆಯಲ್ಲಿ ಶಾಲೆ ಮತ್ತು ಅಂಗನವಾಡಿಗಳ ದುರಸ್ತಿ-ಪುನರ್ ನಿರ್ಮಾಣಕ್ಕೆ ಸಂಬಂಧಿಸಿದಂತೆ 752 ಕಾಮಗಾರಿಗಳಲ್ಲಿ 98 ಪೂರ್ಣಗೊಂಡಿವೆ. 639 ಕಾಮಗಾರಿಗಳು ಪ್ರಗತಿ ಹಂತದಲ್ಲಿದ್ದು, ಉಳಿದ 15 ಕಾಮಗಾರಿಗಳನ್ನು ಶೀಘ್ರವಾಗಿ ಆರಂಭಿಸುವಂತೆ ಪಿಆರ್‍ಇಡಿ ಇಂಜಿನಿಯರ್‍ಗೆ ಸೂಚಿಸಿದರು.