ಕುಶಾಲನಗರ ಪರಿಹಾರ ಕೇಂದ್ರದ ನಿರಾಶ್ರಿತರ ಪ್ರತಿಭಟನೆ

  • ಸಂಜೆ 4 ಗಂಟೆಗೆ ಮಧ್ಯಾಹ್ನದ ಊಟ, ಅರೆಬೆಂದ ಅನ್ನ.
  • 600 ಮಂದಿಗೆ ಕೇವಲ ನಾಲ್ವರು ಅಡುಗೆಯವರು, 3 ಶೌಚಾಲಯ.
  • ಮತ್ತೇ ಮಡಿಕೇರಿ ಸೇವಾ ಭಾರತಿಗೆ ಸ್ಥಳಾಂತರಿಸುವಂತೆ ಆಗ್ರಹ

ಕುಶಾಲನಗರ:  ಮಡಿಕೇರಿ ಮತ್ತು ಸುಂಟಿಕೊಪ್ಪದಿಂದ ಇಲ್ಲಿನ ವಾಲ್ಮೀಕಿ ಭವನಕ್ಕೆ ಸ್ಥಳಾಂತರಗೊಂಡಿರುವ ನಿರಾಶ್ರಿತರು ಇಂದು ರಾತ್ರಿ ಪ್ರತಿಭಟನೆ ನಡೆಸಿದರು.

ಮಡಿಕೇರಿಯ ವಿವಿಧ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದ ನಿರಾಶ್ರಿತರನ್ನು ಮಂಗಳವಾರ ಹಾಗೂ ಸುಂಟಿಕೊಪ್ಪದ ವಿವಿಧ ಕೇಂದ್ರಗಳಲ್ಲಿದ್ದ ನಿರಾಶ್ರಿತರನ್ನು ಇಂದು ಕುಶಾಲನಗರದ ವಾಲ್ಮೀಕಿ ಭವನಕ್ಕೆ ಜಿಲ್ಲಾಡಳಿತ ಸ್ಥಳಾಂತರಿಸಿತ್ತು.

ಈ ಪರಿಹಾರ ಕೇಂದ್ರದಲ್ಲಿ 600 ಮಂದಿ ನಿರಾಶ್ರಿತರಿಗೆ ಕೇವಲ 3 ಶೌಚಾಲಯಗಳಿದ್ದು, ಮಹಿಳೆಯರು ಮತ್ತು ಮಕ್ಕಳಿಗೆ ತೀವ್ರ ಅನಾನು ಕೂಲವಾಗಿದೆ. ಕೇವಲ ನಾಲ್ವರು ಮಾತ್ರ ಅಡುಗೆಯವರಿದ್ದಾರೆ. ಮಧ್ಯಾಹ್ನ ಊಟವನ್ನು ಸಂಜೆ 4 ಗಂಟೆಗೆ ನೀಡಲಾಗುತ್ತಿದೆ. ಅನ್ನ ಅರೆ ಬೆಂದಿರುತ್ತದೆ. ಕುಡಿಯುವ ನೀರಿನ ಸೌಲ ಭ್ಯವೂ ಕೂಡ ಸರಿಯಾಗಿಲ್ಲ ಎಂದು ಆರೋಪಿಸಿ ಇಂದು ರಾತ್ರಿ ಸಂತ್ರಸ್ತರು ಪ್ರತಿಭಟನೆ ನಡೆಸಿದರು.

ನಾವೆಲ್ಲರೂ ಚೆನ್ನಾಗಿ ಬಾಳಿ ಬದುಕಿದವರು. ನಮ್ಮನ್ನು ಸೇವಾಭಾರತಿಯಲ್ಲಿ ಮಕ್ಕಳಂತೆ ನೋಡಿಕೊಳ್ಳಲಾಗುತ್ತಿತ್ತು. ಇಲ್ಲಿ ಎಲ್ಲಾ ಸೌಲಭ್ಯವೂ ಇದೆ ಎಂದು ಜಿಲ್ಲಾಧಿಕಾರಿಗಳು ಇಲ್ಲಿಗೆ ಕಳುಹಿಸಿದರು. ಆದರೆ, ಅಧಿಕಾರಿಗಳು ನಮ್ಮನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದಾರೆ. ಏನಾದರೂ ಪ್ರಶ್ನಿಸಿದರೆ, ಪೊಲೀಸರನ್ನು ಕರೆಸುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ತಮ್ಮನ್ನು ಮತ್ತೇ ಮಡಿಕೇರಿಯ ಸೇವಾಭಾರತಿಗೆ ಸ್ಥಳಾಂತರಿಸಬೇಕೆಂದು ಆಗ್ರಹಿಸಿದ್ದಾರೆ.

ಸಂತ್ರಸ್ತರ ಪ್ರತಿಭಟನೆ ಹೆಚ್ಚಾದಾಗ ಪೊಲೀಸರು ಆಗಮಿಸಿ, ಅವರನ್ನು ಸಮಾ ಧಾನ ಪಡಿಸಲು ಹರಸಾಹಸ ಪಡ ಬೇಕಾಯಿತು. ಕೊನೆಗೆ ನಾಳೆ (ಆ.30) ಸಂಬಂಧಪಟ್ಟ ಅಧಿಕಾರಿಗಳು ಆಗಮಿಸಿ ಮೂಲಭೂತ ಸೌಕರ್ಯ ಸೇರಿದಂತೆ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುತ್ತಾರೆ ಎಂದು ಭರವಸೆ ನೀಡಿದ ನಂತರ ಪ್ರತಿಭಟನಾಕಾರರು ಸಮಾಧಾನಗೊಂಡರು.,