ನಾಳೆಯಿಂದ ಮೈಸೂರಲ್ಲಿ ನಾಲ್ಕು ದಿನಗಳ `ನಮ್ಮೂರ ತಿಂಡಿ ಮೇಳ’

ಮೈಸೂರು: ಮೈಸೂರು ದಸರಾ ಆಹಾರ ಮೇಳದ ಬಳಿಕ ಮೈಸೂರಿನಲ್ಲಿ ನಾನಾ ರೀತಿಯ ಸಸ್ಯಹಾರಿ ಆಹಾರಗಳನ್ನು ಸವಿಯುವ ಮತ್ತೊಂದು ಅವಕಾಶ ದೊರೆತಿದೆ. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನ.23ರಿಂದ 26ರವ ರೆಗೆ `ನಮ್ಮೂರ ತಿಂಡಿ ಮೇಳ’ವನ್ನು ಭಾಗ್ಯಲಕ್ಷ್ಮಿ ಫುಡ್ಸ್ ಆಯೋಜಿಸಿದೆ.

ಮಹಿಳೆಯರಲ್ಲಿನ ಅಡುಗೆ ಕೌಶಲ್ಯವನ್ನು ಗುರ್ತಿಸಿ, ಪ್ರೋತ್ಸಾಹಿಸುವ ಸಲುವಾಗಿ ಈ ಮೇಳವನ್ನು ಆಯೋಜಿಸಿದ್ದು, ಮೇಳದಲ್ಲಿ 150 ವಿವಿಧ ಖಾದ್ಯಗಳ ಸ್ಟಾಲ್‍ಗಳಿರಲಿವೆ. ಈಗಾಗಲೇ ಕಳೆದ ವರ್ಷ ಏರ್ಪಡಿಸಿದ್ದ ತಿಂಡಿ ಮೇಳ ಯಶಸ್ವಿಯಾದ ಹಿನ್ನೆಲೆಯಲ್ಲಿ ಈ ವರ್ಷ ಮತ್ತೆ ನಮ್ಮೂರ ತಿಂಡಿ ಮೇಳ ಆಯೋಜಿ ಸಲಾಗಿದೆ ಎಂದು ಮೇಳದ ವ್ಯವಸ್ಥಾಪಕರಾದ ಭಾಗ್ಯಲಕ್ಷ್ಮಿ ಎಂಟರ್‍ಪ್ರೈಸಸ್‍ನ ನಿರ್ದೇಶಕ ತನಯ್ ಬೈಸಾನಿ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆಹಾರವನ್ನು ಸವಿದು ಸಂಭ್ರಮಿಸುವ ಜೊತೆಗೆ ಮನರಂಜನೆಗೂ ಇಲ್ಲಿ ಅವಕಾಶವಿದೆ. ಮೇಳದ ನಾಲ್ಕು ದಿನಗಳಲ್ಲೂ ಮಹಿಳೆ ಯರು, ಮಕ್ಕಳಿಗೆ ನಾನಾ ರೀತಿಯ ಸ್ಪರ್ಧೆಗಳಿವೆ. ಮೈಸೂರು ಅಡುಗೆ ಮಹಾರಾಣಿ, ಮೈಸೂರು ಮುದ್ದು ಮಗು, ಮೈಸೂರು ಸಕತ್ ಜೋಡಿ, ಚಿತ್ರಕಲಾ ಸ್ಪರ್ಧೆ, ಅಲಂಕಾರಿಕ ಉಡುಪು ಸ್ಪರ್ಧೆ ಏರ್ಪಡಿಸಿದೆ. ಅಲ್ಲದೆ 23ರಂದು ಸಂಜೆ 6 ಗಂಟೆಗೆ ಸುಧಾ ಬರಗೂರು ಅವರಿಂದ ಹಾಸ್ಯ ಮೇಳ, 24ರಂದು ಸಂಜೆ 7 ಗಂಟೆಗೆ ವಿಜಯ್ ಪ್ರಕಾಶ್ ಮತ್ತು ಅನುರಾಧಾ ಭಟ್ ಅವರಿಂದ ಸಂಗೀತ ಸಂಜೆ, 25ರಂದು ಸಂಜೆ 6.30 ಗಂಟೆಗೆ ಬೀಟ್ ಗುರೂಸ್ ಬೀಟ್ಸ್ ಮೇಳ, 26ರಂದು ಮಧ್ಯಾಹ್ನ 3.30 ಗಂಟೆಗೆ ಸಿಹಿಕಹಿ ಚಂದ್ರು ಅವರಿಂದ ಅಡುಗೆ ಕಾರ್ಯಕ್ರಮ. 6.30 ಗಂಟೆಗೆ ಮಿಮಿಕ್ರಿ ಗೋಪಿ ಅವರ ಮಿಮಿಕ್ರಿ ಕಾರ್ಯಕ್ರಮವಿದೆ ಎಂದು ಹೇಳಿದರು. ನ.23ರಂದು ಮಧ್ಯಾಹ್ನ 12 ಗಂಟೆಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು ತಿಂಡಿ ಮೇಳಕ್ಕೆ ಚಾಲನೆ ನೀಡಲಿದ್ದಾರೆ.

ಸಂಸದ ಪ್ರತಾಪಸಿಂಹ, ಶಾಸಕ ಎಲ್.ನಾಗೇಂದ್ರ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಭಾಗ್ಯಲಕ್ಷ್ಮಿ ಫುಡ್ಸ್ ಮಾರುಕಟ್ಟೆ ವ್ಯವಸ್ಥಾಪಕ ಅರವಿಂದ್, ಮೈಸೂರು ಪ್ರಭಾರ ಎಂ.ಮೂರ್ತಿ ಉಪಸ್ಥಿತರಿದ್ದರು