ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘ ಅಸ್ತಿತ್ವಕ್ಕೆ

ಮಡಿಕೇರಿ: ಮಡಿಕೇರಿ ನಗರದ ಸರ್ಕಾರಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘ ಅಸ್ತಿತ್ವಕ್ಕೆ ಬಂದಿದ್ದು, ಸದ್ಯದಲ್ಲಿಯೇ ಸಂಘದ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಸಂಘದ ನೂತನ ಅಧ್ಯಕ್ಷೆ ಕುಶಾಲಿನಿ ತಿಳಿಸಿದ್ದಾರೆ.

ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ 1839ರಲ್ಲಿ ಸ್ಥಾಪನೆಯಾಗಿ ಅನೇಕ ವಿದ್ಯಾ ರ್ಥಿಗಳ ಸಾಧನೆಯ ಮೆಟ್ಟಿಲಾಗಿದೆ. ಶಾಲೆಯಿಂದ ಹೊರಬಂದ ಎಲ್ಲ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ ಶಾಲೆಯ ಅಭಿವೃದ್ಧಿಗೆ ಶ್ರಮಿಸಲು ಹಳೆಯ ವಿದ್ಯಾರ್ಥಿ ಸಂಘ ನಿರ್ಧರಿಸಿದೆ. ಈಗಾಗಲೇ ಸಂಘದ ಸದಸ್ಯತ್ವ ಕಾರ್ಯವೂ ಪ್ರಗತಿಯಲ್ಲಿದೆ. ಹಳೆಯ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡು ಶಾಲೆಯ ಪ್ರಸ್ತುತ ಶಾಲೆಯಲ್ಲಿ ವಿದ್ಯಾರ್ಜನೆ ಮಾಡುತ್ತಿರುವ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಕೈ ಜೋಡಿಸಬೇಕೆಂದು ಅವರು ಮನವಿ ಮಾಡಿದ್ದಾರೆ. ಅನೇಕ ದಶಕಗಳನ್ನು ಕಂಡಿರುವ ಈ ಶಾಲೆ ಕೊಡಗು ಜಿಲ್ಲೆಯಲ್ಲೇ ಅತ್ಯಂತ ಹಿರಿಯ ಶಾಲೆಯಾಗಿದೆ. ಖ್ಯಾತ ಕವಿ ಪಂಜೆ ಮಂಗೇಶರಾಯರು ಮುಖ್ಯೋಪಾಧ್ಯಾಯರಾಗಿ ಕಾರ್ಯನಿರ್ವಹಿಸಿದ್ದರು ಎನ್ನುವ ಹೆಗ್ಗಳಿಕೆಯೂ ಈ ಶಾಲೆಗಿದೆ ಎಂದರು.

ನೂತನ ಕಟ್ಟಡ ನಿರ್ಮಾಣ: ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಈಗ ಹೊಸ ರೂಪ ಬಂದಿದೆ. ಸುಮಾರು 2-3 ಕೋಟಿ ರೂ. ವೆಚ್ಚದಲ್ಲಿ ಹಳೆಯ ಕಟ್ಟಡದ ಪಕ್ಕದಲ್ಲೇ ಸುಸುಜ್ಜಿತ ನೂತನ ಕಟ್ಟಡದ ನಿರ್ಮಾಣ ಕಾರ್ಯ ನಡೆಯುತ್ತಿದೆ. ಕಾಮಗಾರಿ ಬಹುತೇಕ ಮುಕ್ತಾಯದ ಹಂತದಲ್ಲಿದೆ. ಕೆಲವೇ ದಿನಗಳಲ್ಲಿ ನೂತನ ಕಟ್ಟಡದಲ್ಲಿ ತರಗತಿಗಳು ಆರಂಭಗೊಳ್ಳಲಿವೆ ಎಂದು ಶಾಲೆಯ ಮುಖ್ಯೋಪಾಧ್ಯಾಯ ಶಿವರಾಂ ತಿಳಿಸಿದ್ದಾರೆ. ಹಳೆಯ ವಿದ್ಯಾರ್ಥಿಗಳು ಈ ಶಾಲೆಯನ್ನು ಮತ್ತಷ್ಟು ಪ್ರಗತಿ ಪಥದತ್ತ ಸಾಗಿಸಲು ಸದಸ್ಯತ್ವವನ್ನು ಪಡೆಯಲು ಸಂಪರ್ಕಿಸಬೇಕಾದ ಮೊ.ಸಂ : ರಾಜೇಶ್-9916070991, ಲೋಹಿತ್-9741807005, ಶಿಕ್ಷಕ ಶಿವರಾಮ್-9591168181.