ಕಾಡಾನೆ ದಾಳಿ; ಮಹಿಳೆ ಬಲಿ

ಗುಂಡ್ಲುಪೇಟೆ:  ಕಾಡಾನೆ ದಾಳಿಗೆ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿ ರುವ ಘಟನೆ ತಾಲೂಕಿನ ಆಲತ್ತೂರು ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.ಚಿಕ್ಕತಾಯಮ್ಮ(56) ಕಾಡಾನೆ ದಾಳಿಗೆ ಬಲಿಯಾದವರು. ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಕಾಡಾನೆಯೊಂದು ತಾಲೂಕಿನ ಬಂಡೀಪುರ ಹುಲಿ ಯೋಜನೆಯ ಓಂಕಾರ್ ವಲಯದ ಕಾಡಂಚಿನ ಆಲತ್ತೂರು ಗ್ರಾಮದ ಕರಿಯಶೆಟ್ಟಿ ಎಂಬುವರ ಜಮೀನಿನಲ್ಲಿ ಹತ್ತಿಯನ್ನು ಬಿಡಿಸುತ್ತಿದ್ದ ನಾಲ್ವರು ಮಹಿಳಾ ಕಾರ್ಮಿಕರ ಮೇಲೆ ಏಕಾಏಕಿ ದಾಳಿ ನಡೆಸಿದೆ. ಈ ವೇಳೆ ಮೂವರು ಮಹಿಳಾ ಕಾರ್ಮಿಕರು ಕಾಡಾನೆಯಿಂದ ಪಾರಾಗಿ ದ್ದಾರೆ. ಆದರೆ ಚಿಕ್ಕತಾಯಮ್ಮ ಅವರ ಮೇಲೆ ಆನೆ ದಾಳಿ ನಡೆಸಿ ಬಲಿ ಪಡೆದಿದೆ.

ರೈತರ ಆಕ್ರೋಶ: ಕಾಡಂಚಿನಲ್ಲಿ ಅಳವಡಿಸಿದ್ದ ಸೋಲಾರ್ ಬೇಲಿ ಕೆಟ್ಟಿದ್ದು, ಕಂದಕ ಗಳು ಮುಚ್ಚಿಕೊಂಡಿವೆ. ಇದರಿಂದ ಪ್ರತಿದಿನ ವನ್ಯಜೀವಿಗಳು ಅರಣ್ಯದಿಂದ ಹೊರ ಬರುತ್ತಿದ್ದು, ರೈತರ ಜಮೀನಿಗೆ ನುಗ್ಗಿ ರೈತರು ಕಷ್ಟಪಟ್ಟು ಬೆಳೆದ ಬೆಳೆಗಳನ್ನು ನಾಶಪಡಿ ಸುತ್ತಿವೆ. ಹಲವು ಬಾರಿ ಮನವಿ ಮಾಡಿದ್ದರೂ ಸೋಲಾರ್ ಬೇಲಿ ದುರಸ್ತಿ ಮಾಡಿಲ್ಲ ಹಾಗೂ ಕಂದಕ ನಿರ್ಮಿಸಿಲ್ಲ. ಪರಿಣಾಮ ರೈತರು ಜೀವ ಬಿಡಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಬೇಗೂರು ಠಾಣೆ ಎಸ್‍ಐ ಲೋಹಿತ್ ಕುಮಾರ್, ಸಿಬ್ಬಂದಿ ಭೇಟಿ ನೀಡಿದ್ದರು.