ಬಂಡೀಪುರ ಸಫಾರಿ ಮಾರ್ಗ ಅಗಲೀಕರಣಕ್ಕೆ ಮುಂದಾದ ಅರಣ್ಯ ಇಲಾಖೆ

ಮೈಸೂರು, ಜೂ.23(ಎಂಟಿವೈ)-ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ವಲಯದ ರಸ್ತೆಗಳನ್ನು ಅಗಲೀಕರಣ ಮಾಡಲು ಅರಣ್ಯ ಇಲಾಖೆ ಮುಂದಾಗಿದೆ. ಇತ್ತೀಚಿನ ದಿನಗಳಲ್ಲಿ ಸಫಾರಿ ವಾಹನಗಳ ಮೇಲೆ ಕಾಡಾನೆ ದಾಳಿ ನಡೆಸುವುದಕ್ಕೆ ಮುಂದಾದ ಘಟನೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇದೀಗ ಮುಂಜಾಗ್ರತಾ ಕ್ರಮವಾಗಿ ರಸ್ತೆ ಅಗಲೀಕರಣ ಮಾಡುವುದಕ್ಕೆ ಇಲಾಖೆ ನಿರ್ಧರಿಸಿದೆ. ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಪ್ರವಾಸೋದ್ಯಮದ ಹಿನ್ನೆಲೆಯಲ್ಲಿ 256 ಕಿ.ಮೀ. ಸಫಾರಿ ಮಾರ್ಗ ವನ್ನು ಸಿದ್ಧಪಡಿಸಲಾಗಿದೆ. ಆದರೆ ಅದರಲ್ಲಿ ಕೇವಲ 68 ಕಿ.ಮೀ. ಮಾರ್ಗದಲ್ಲಿ ಮಾತ್ರ ಸಫಾರಿ ವಾಹನದ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗಿತ್ತು. ಈ ಮಾರ್ಗದ ರಸ್ತೆ ಗಳು ಕೇವಲ 10 ಮೀ. ಅಷ್ಟೇ ಅಗಲವಿತ್ತು. ಇದರಿಂದ ಎದುರು ಬದಿಯಿಂದ ಮತ್ತೊಂದು ಸಫಾರಿ ವಾಹನ ಬಂದರೆ ಕಷ್ಟವಾಗುತ್ತಿತ್ತು. ಅಲ್ಲದೇ ರಸ್ತೆಗೆ ಹೊಂದಿ ಕೊಂಡಂತೆ ದಟ್ಟವಾದ ಪೊದೆಗಳು, ಲಂಟಾನ ಗಿಡ ಬೆಳೆದುಕೊಂಡಿದ್ದರಿಂದ ಆನೆಗಳು ಅಡಗಿದ್ದರೂ ತಿಳಿಯು ತ್ತಿರಲಿಲ್ಲ. ಒಮ್ಮೊಮ್ಮೆ ಪೊದೆಯಲ್ಲಿದ್ದ ಆನೆ ದಿಢೀರನೆ ಸಫಾರಿ ವಾಹನವನ್ನು ಅಡ್ಡಗಟ್ಟುವುದು, ದಾಳಿಗೆ ಮುಂದಾ ಗುತ್ತಿದ್ದವು. ಈ ಹಿನ್ನೆಲೆಯಲ್ಲಿ ಸಫಾರಿ ಮಾರ್ಗದ ಅಗ ಲೀಕರಣಕ್ಕೆ ಇಲಾಖೆ ಕ್ರಮ ಕೈಗೊಂಡಿದೆ.

35 ಲಕ್ಷ ರೂ. ವೆಚ್ಚದಲ್ಲಿ ಸಫಾರಿ ಮಾರ್ಗದ ರಸ್ತೆಯನ್ನು ಅಗಲೀಕರಣಗೊಳಿಸುವ ಕಾಮಗಾರಿ ನಡೆಸುವುದಕ್ಕೆ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಪ್ರವಾಸಿಗರ ಹಿತ ಕಾಯುವ ನಿಟ್ಟಿನಲ್ಲಿ ಈ ಮಾರ್ಗಗಳ ರಸ್ತೆ ಅಗಲ ಮಾಡಲೇಬೇಕಾದ ಅನಿವಾರ್ಯತೆಯನ್ನು ಇಲಾಖೆ ಹಿರಿಯ ಅಧಿಕಾರಿಗಳು ಮನಗಂಡಿದ್ದು, ಸಮ್ಮತಿ ಸೂಚಿಸಿದ್ದಾರೆ. ಶೀಘ್ರವೇ ರಸ್ತೆ ಅಗಲೀಕರಣದ ಕಾಮಗಾರಿ ಆರಂಭವಾಗುವ ವಿಶ್ವಾಸ ವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಹೆಚ್ಚುತ್ತಿರುವ ಪ್ರವಾಸಿಗರು: ಬಂಡೀಪುರ ಅರಣ್ಯ ಪ್ರದೇಶ ದಲ್ಲಿ ಸಫಾರಿ ಮಾಡಲು ಇಚ್ಛಿಸಿ ಆಗಮಿಸುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲಿಯೂ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ರಜೆ ಇರುವ ಸಂದರ್ಭದಲ್ಲಿಯೇ ಬಂಡೀಪುರಕ್ಕೆ ಆಗಮಿಸುವ ಪ್ರವಾಸಿ ಗರ ಸಂಖ್ಯೆ ದುಪ್ಪಟ್ಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರವಾಸಿ ಗರ ಹಿತ ಕಾಯುವುದಕ್ಕೆ ಇಲಾಖೆ ಈ ಕ್ರಮ ಕೈಗೊಂಡಿದೆ.