ಹುಲಿಯನ್ನು ಗ್ರಾಮದಿಂದ ಕಾಡಿಗಟ್ಟಿದ ಅರಣ್ಯ ಸಿಬ್ಬಂದಿ

ಗುಂಡ್ಲುಪೇಟೆ: ತಾಲೂಕಿನ ಬಂಡೀಪುರ ಉದ್ಯಾನವನದ ವ್ಯಾಪ್ತಿಯ ಹಂಗಳ ಗ್ರಾಮದ ಸಮೀಪದ ಕಲಿಗೌಡನಹಳ್ಳಿ ಬಳಿ ಪ್ರತ್ಯಕ್ಷಗೊಂಡಿದ್ದ ಹುಲಿಯನ್ನು ಮರಳಿ ಕಾಡಿಗಟ್ಟಲು ಅರಣ್ಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಕಾಡಂಚಿನ ಗ್ರಾಮವಾದ ಹಂಗಳ ಸಮೀಪದಲ್ಲಿ ಪ್ರತ್ಯಕ್ಷಗೊಂಡು ಜನರಲ್ಲಿ ಆತಂಕ ಮೂಡಿಸಿದ್ದ ಹುಲಿಯನ್ನು ಸೆರೆ ಹಿಡಿದು ಕಾಡಿಗೆ ಬಿಡಲು ಕಾರ್ಯಾಚರಣೆ ಮಾಡಲು ಮುಂದಾದ ಅರಣ್ಯ ಇಲಾಖೆಯ ವಾಚರ್ ರಾಮು ಅವರ ಕೈಯನ್ನು ಕಚ್ಚಿ ಗಾಯಗೊಳಿಸಿ ಪರಾರಿಯಾಗಿದ್ದ ಹುಲಿಯು ಶನಿವಾರ ಬೆಳಗ್ಗೆ ಹಂಗಳ ಸಮೀಪದಲ್ಲಿರುವ ಕಲಿಗೌಡನ ಹಳ್ಳಿಯ ಮಾದೇಗೌಡ ಎಂಬುವವರ ಟೊಮೋಟೊ ಹೊಲದಲ್ಲಿ ಅವಿತುಕೊಂಡಿತ್ತು.

ನಂತರ ಅರಣ್ಯ ಇಲಾಖೆ ಸಿಬ್ಬಂದಿಗಳು ಹುಲಿಯನ್ನು ಜೆಸಿಬಿ ಸಹಾಯದಿಂದ ಹುಡುಕಾಟ ನಡೆಸಿದಾಗ ಅದು ಪಕ್ಕದಲ್ಲಿರುವ ಶಿವಮಲ್ಲೇಗೌಡ ಎಂಬುವವರ ಜಮೀನಿನಲ್ಲಿದ್ದ ನಾಯಿಯೊಂದನ್ನು ತಿಂದು ಪರಾರಿಯಾಯಿತು. ಮತ್ತೆ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ ನಾಗರಹೊಳೆಯಿಂದ ಕರೆ ತರಲಾಗಿದ್ದ ಎರಡು ಸಾಕಾನೆಗಳ ಸಹಾಯದಿಂದ ಹುಲಿಯ ಜಾಡನ್ನು ಪತ್ತೆ ಮಾಡಿ ಅದನ್ನು ಮೇಲು ಕಾಮನಹಳ್ಳಿ ಸಮೀಪದಲ್ಲಿರುವ ಗಾಳಿ ಆಂಜನೇಯಸ್ವಾಮಿ ದೇವಸ್ಥಾನದ ಹಿಂಭಾಗ ದಲ್ಲಿರುವ ಗುಡ್ಡದ ಸಮೀಪಕ್ಕೆ ಓಡಿಸಲಾಯಿತು ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಅಂಬಾಡಿ ಮಾಧವ್ ‘ಮೈಸೂರುಮಿತ್ರ’ಕ್ಕೆ ತಿಳಿಸಿದ್ದಾರೆ.