ದೇವರಾಜ ಮಾರುಕಟ್ಟೆ ಭವಿಷ್ಯ ನಿರ್ಧರಿಸಲುಪಾರಂಪರಿಕ ತಜ್ಞರ ಉಪ ಸಮಿತಿ ರಚನೆ

ಮೈಸೂರು,ಆ.3(ಆರ್‍ಕೆ)-ಮೈಸೂರಿನ ಅತೀ ಹಳೆಯದಾದ ದೇವರಾಜ ಮಾರು ಕಟ್ಟೆ ಪಾರಂಪರಿಕ ಕಟ್ಟಡವನ್ನು ಕೆಡವಿ ಹೊಸದಾಗಿ ನಿರ್ಮಿಸುವುದೋ ಇಲ್ಲವೇ ದುರಸ್ತಿ ಮೂಲಕ ಸಂರಕ್ಷಣೆ ಮಾಡು ವುದೋ ಎಂಬುದರ ಬಗ್ಗೆ ಅಧ್ಯಯನ ನಡೆಸಿ, ವರದಿ ನೀಡಲು ಜಿಲ್ಲಾಡಳಿತವು ಪಾರಂಪರಿಕ ತಜ್ಞರ ಉಪಸಮಿತಿಯನ್ನು ರಚಿಸಿದೆ.

ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲಾ ಪಾರಂಪರಿಕ ಸಮಿತಿ ವಿಶೇಷ ಸಭೆಯಲ್ಲಿ ಈ ಸಂಬಂಧ ಪ್ರತ್ಯೇಕ ಉಪ ಸಮಿತಿ ರಚಿಸಲಾಗಿದ್ದು, ತಜ್ಞರು ಸ್ಥಳ ಪರಿಶೀಲಿಸಿ 15 ದಿನದೊಳಗಾಗಿ ತಮ್ಮ ಸ್ಪಷ್ಟ ಅಭಿ ಪ್ರಾಯದೊಂದಿಗೆ ವರದಿ ಸಲ್ಲಿಸುವಂತೆ ಡಿಸಿ ಅಭಿರಾಂ ಜಿ. ಶಂಕರ್ ತಿಳಿಸಿದ್ದಾರೆ.

15 ಸದಸ್ಯರನ್ನೊಳಗೊಂಡ ಉಪ ಸಮಿತಿಯಲ್ಲಿ ಪುರಾತತ್ವ ಹಾಗೂ ಇತಿ ಹಾಸಕಾರರು, ಪಾರಂಪರಿಕ ತಜ್ಞರು, ಮುಡಾ ಮತ್ತು ಮೈಸೂರು ಮಹಾನಗರ ಪಾಲಿಕೆ ಆಯುಕ್ತರು, ಸೂಪರಿಂ ಟೆಂಡಿಂಗ್ ಇಂಜಿನಿಯರ್‍ಗಳು, ಪುರಾತತ್ವ- ಪರಂ ಪರೆ ಇಲಾಖೆ ಅಧಿಕಾರಿಗಳು ಇರುತ್ತಾರೆ.

ಈ ಹಿಂದೆ ಕರ್ನಾಟಕ ರಾಜ್ಯ ಟಾಸ್ಕ್ ಫೋರ್ಸ್ ಕಮಿಟಿ ಮುಖ್ಯಸ್ಥ ಬಿ.ಆರ್. ಶ್ರೀನಿವಾಸ ನೇತೃತ್ವದಲ್ಲಿ ದೇವರಾಜ ಮಾರುಕಟ್ಟೆ ಕಟ್ಟಡವನ್ನು ಪರಿಶೀಲಿಸಿದ್ದ ಸಮಿತಿ ಸದಸ್ಯರಾಗಿದ್ದ ಎಸ್‍ಜೆಸಿಇ ಪ್ರಾಂಶುಪಾಲ ಸೈಯ್ಯದ್ ಶಕಿಬ್ ಉರ್ ರೆಹಮಾನ್ ಹಾಗೂ ದಿ ಇನ್‍ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ ಮಾಜಿ ಅಧ್ಯಕ್ಷ ಸಿ.ಎನ್.ಬಾಬು ಅವರು ಕಟ್ಟಡವನ್ನು ಸಂಪೂರ್ಣ ನೆಲಸಮಗೊಳಿಸಿ ಅದೇ ಮಾದರಿಯಲ್ಲಿ ಹೊಸದಾಗಿ ನಿರ್ಮಿಸು ವುದು ಸೂಕ್ತ ಎಂದು ವರದಿ ನೀಡಿದ್ದರು.

ಆದರೆ, ಪುರಾತತ್ವ ಪ್ರಾಧ್ಯಾಪಕರಾದ ಪಾರಂಪರಿಕ ತಜ್ಞ ಪ್ರೊ.ರಂಗರಾಜು ನೇತೃತ್ವದ ಜಿಲ್ಲಾ ಪಾರಂಪರಿಕ ತಜ್ಞರ ಸಮಿತಿಯು, ಕಟ್ಟಡ ಗಟ್ಟಿಯಾಗಿದ್ದು, ಅದೇ ಮಾದರಿಯಲ್ಲಿ ದುರಸ್ತಿಗೊಳಿಸಿ ಉಳಿಸಿಕೊಳ್ಳ ಬೇಕೆಂದು ಶಿಫಾರಸು ಮಾಡಿತ್ತು.

ಈ ಎರಡೂ ಸಮಿತಿಗಳು ನೀಡಿದ್ದ ವಿಭಿನ್ನ ವರದಿ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಸಮಗ್ರ ವರದಿ ನೀಡಿ ಸೂಕ್ತ ಕ್ರಮಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಈ ನಡುವೆ ರಾಜ್ಯ ಹೈಕೋರ್ಟ್ ದೇವರಾಜ ಮಾರುಕಟ್ಟೆ ಕಟ್ಟಡವನ್ನು ನೆಲಸಮಗೊಳಿಸಬೇಕೆಂದು ಆದೇಶ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅವರು ಇಂದು ಸಭೆ ನಡೆಸಿದರು.

ಮುಡಾ ಆಯುಕ್ತ ಪಿ.ಎಸ್.ಕಾಂತರಾಜ್, ಸೂಪರಿಂಟೆಂಡಿಂಗ್ ಇಂಜಿನಿಯರ್ ಬಿ.ಕೆ. ಸುರೇಶಬಾಬು, ನಗರ ಯೋಜಕ ಸದಸ್ಯ ಬಿ.ಎನ್.ಗಿರೀಶ, ಪುರಾತತ್ವ ಇಲಾಖೆ ಉಪನಿರ್ದೇಶಕಿ ನಿರ್ಮಲಾ ಮಠಪತಿ, ಎಸ್‍ಜೆಸಿಇ ಮಾಜಿ ಪ್ರಾಂಶುಪಾಲ ಸೈಯದ್ ಶಕೀಬ್ ಉರ್ ರೆಹಮಾನ್ ಸೇರಿದಂತೆ ಹಲವರು ಸಭೆಯಲ್ಲಿ ಭಾಗವಹಿಸಿದ್ದರು.