ಬೆಂಗಳೂರು, ಜು. 27- ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೇ ರಲು ಮಾಜಿ ಸಚಿವ ಹೆಚ್.ಡಿ.ರೇವಣ್ಣ ನಾಲ್ವರು ಕಾಂಗ್ರೆಸ್ ನಿರ್ದೇಶಕರನ್ನು ಹೈಜಾಕ್ ಮಾಡಿ, ಹೈದರಾಬಾದ್‍ನ ರೆಸಾರ್ಟ್‍ಗೆ ಕರೆದೊಯ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೆಎಂಎಫ್‍ನಲ್ಲಿ ಕಾಂಗ್ರೆಸ್ ಬಹು ಮತ ಹೊಂದಿದೆ. ಕಾಂಗ್ರೆಸ್‍ನ ಒಂಭತ್ತು ನಿರ್ದೇಶಕರಿದ್ದರೆ, ಜೆಡಿಎಸ್‍ನ ಕೇವಲ ಮೂವರು ನಿರ್ದೇಶಕರು ಮಾತ್ರ ಇದ್ದಾರೆ. ಸಹಜವಾಗಿಯೇ ಬಹುಮತ ಹೊಂದಿರುವ ಕಾಂಗ್ರೆಸ್‍ನಿಂದ ಕೆಎಂಎಫ್ ಅಧ್ಯಕ್ಷಗಾದಿ ಹಿಡಿಯಲು ಶಾಸಕ ಭೀಮಾ ನಾಯ್ಕ್ ಲಾಬಿ ನಡೆಸುತ್ತಿದ್ದರು.
ಕಾಂಗ್ರೆಸ್ ಮುಖಂಡರು ಕೂಡ ಭೀಮಾನಾಯ್ಕ್ ಅವರಿಗೆ ಬೆಂಬಲ ಸೂಚಿಸಿದ್ದರು ಎನ್ನಲಾಗಿದೆ. ಈ ನಡುವೆ ಮೈತ್ರಿ ಸರ್ಕಾರ ಪತನಗೊಂಡು ಸಚಿವ ಸ್ಥಾನವನ್ನು ಕಳೆದುಕೊಂಡಿರುವ ರೇವಣ್ಣ, ಕೆಎಂಎಫ್ ಅಧ್ಯಕ್ಷ ಸ್ಥಾನ ಹಿಡಿಯುವ ಸಲುವಾಗಿ ಕಾಂಗ್ರೆಸ್ ನಿರ್ದೇಶಕರಾದ ಉಡುಪಿಯ ಕಾಪು ದಿವಾಕರ ಶೆಟ್ಟಿ, ಧಾರಾವಾಡದ ಹಿರೇ ಗೌಡ, ಶಿವಮೊಗ್ಗದ ವೀರಭದ್ರ ಬಾಬು ಮತ್ತು ವಿಜಯ ಪುರದ ಶ್ರೀಶೈಲ ಅವರನ್ನು ಹೈಜಾಕ್ ಮಾಡಿ ಹೈದರಾ ಬಾದ್‍ನ ಬಂಜಾರ ಹಿಲ್ಸ್‍ನಲ್ಲಿರುವ ರೆಸಾರ್ಟ್‍ಗೆ ಕರೆದೊಯ್ಯುವ ಮೂಲಕ ಕೆಎಂಎಫ್ ಅಧ್ಯಕ್ಷಗಾದಿಗಾಗಿ ರೆಸಾರ್ಟ್ ರಾಜಕಾರಣ ಆರಂಭಿಸಿದ್ದಾರೆ.