ಪಿಂಚಣಿಗಾಗಿ ಪರದಾಡುತ್ತಿರುವ ಯುದ್ಧದಲ್ಲಿ  ಕಾಲು ಬೆರಳು ಕಳೆದುಕೊಂಡ ಮಾಜಿ ಸೈನಿಕ ಹಿರಿಯಣ್ಣ

ಮೈಸೂರು: ತಮ್ಮ ಕುಟುಂಬ, ಸಂಬಂಧಿಕರಿಂದ ದೂರ ಉಳಿದು ಪ್ರಾಣವನ್ನೂ ಲೆಕ್ಕಿಸದೆ ದೇಶ ರಕ್ಷಣೆಗಾಗಿ ಗಡಿಭಾಗದಲ್ಲಿ ಕೆಲಸ ಮಾಡಿ ನಿವೃತ್ತರಾಗಿರುವ ಹಲವು ಮಾಜಿ ಸೈನಿಕರು ನಿವೃತ್ತಿ ನಂತರದ ಸೌಲಭ್ಯಗಳಿಗಾಗಿ ಇನ್ನೂ ಪರದಾಡುತ್ತಿದ್ದಾರೆ.

ಮೈಸೂರಿನ ಕಲಾಮಂದಿರದಲ್ಲಿ ಇಂದಿನಿಂದ ಆರಂಭವಾಗಿರುವ ಎರಡು ದಿನಗಳ ಡಿಫೆನ್ಸ್ ಪೆನ್ಷನ್ ಅದಾಲತ್‍ಗೆ ಮೈಸೂರು ಮತ್ತು ಸುತ್ತಮುತ್ತಲಿಂದ ಹಲವು ಸಮಸ್ಯೆಗಳನ್ನೊತ್ತು ನೂರಾರು ಮಾಜಿ ಸೈನಿಕರು ಬಂದಿದ್ದರು.

ಆ ಪೈಕಿ ತೀವ್ರ ಕ್ಲಿಷ್ಟಕರ ತೊಂದರೆಯಿಂದ ಮುಕ್ತಿ ಪಡೆಯಲು ಆಗಮಿಸಿದ್ದ ಕೆಲವೇ ಮಾಜಿ ಸೈನಿಕರು ಮಾಧ್ಯಮದೊಂದಿಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ.

ವಾರ್ ಇಂಜುರಿ ಪೆನ್ಷನ್: ಹಿಮಾಚಲಪ್ರದೇಶದ 260 ಮೀಡಿಯನ್ ರೆಜಿಮೆಂಟ್‍ನಲ್ಲಿ ನಾಯಕ ಹುದ್ದೆ ನಿರ್ವಹಿಸಿದ ಮೈಸೂರಿನ ಹಿರಿಯಣ್ಣ ಅವರು 18 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ.

ಹಿಮಾಚಲ ಪ್ರದೇಶದ ಸಿಹೆಚ್‍ಎನ್ ಗ್ಲೇಸಿಯರ್ ದಟ್ಟ ಹಿಮಪಾತ -42 ಡಿಗ್ರಿ ಹವಾಮಾನದಲ್ಲಿ (ಭೂಮಿಯಿಂದ 32 ಸಾವಿರ ಅಡಿ ಎತ್ತರ ಪ್ರದೇಶ) ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ನಡೆದ ಯುದ್ಧದಲ್ಲಿ ತನ್ನ ಬಲಗಾಲಿಗೆ ಗಾಯಗಳಾಗಿ ಮೂರು ಬೆರಳುಗಳನ್ನು ಕಳೆದುಕೊಂಡೆ ಎಂದು ಹಿರಿಯಣ್ಣ ತನ್ನ ಅಳಲು ತೋಡಿಕೊಂಡರು.

ನಾನು ಸೇವೆ ಸಲ್ಲಿಸಿದ್ದಕ್ಕೆ ಸಾಮಾನ್ಯ ಪೆನ್ಷನ್ ಬರುತ್ತಿದೆ. ಆದರೆ ಯುದ್ಧ ಭೂಮಿಯಲ್ಲಿ ಹೋರಾಡಿ ವಾರ್ ಇಂಜುರಿಯಾಗಿದ್ದಕ್ಕೆ ನೀಡಬೇಕಾದ ಪ್ರತ್ಯೇಕ ಮಾಸಿಕ ಪಿಂಚಣಿ 9 ಸಾವಿರ ರೂ.ಗಳನ್ನು ತಡೆಹಿಡಿಯಲಾಗಿದೆ ಎಂದು ಹೇಳಿದರು.

ಹೆಚ್ಚುವರಿ ಪೆನ್ಷನ್ ಸಿಕ್ಕಿಲ್ಲ: ಸೇನೆಯಲ್ಲಿ ಸುಬೇದಾರ್ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ತಮಗೆ ಬರಬೇಕಾದ 4 ಸಾವಿರ ಹೆಚ್ಚುವರಿ ಪಿಂಚಣಿ 2014ರ ಜುಲೈ 1ರಿಂದ ಬರುತ್ತಿಲ್ಲ. ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಮಾಜಿ ಸೈನಿಕ ತಿಮ್ಮಯ್ಯ ಅಳಲು ತೋಡಿಕೊಂಡರು.

5 ವರ್ಷಗಳಿಂದ ಬಾಕಿ ಉಳಿದಿದೆ: ನಮ್ಮ ತಂದೆಯವರು ಸೇನೆಯಲ್ಲಿದ್ದು ನಿವೃತ್ತರಾದ ನಂತರ ಮೈಸೂರಿನ ಸಿಎಫ್‍ಟಿಆರ್‍ಐನಲ್ಲಿ ಕೆಲಸ ಮಾಡುತ್ತಿದ್ದರು. ಅವರಿಗೆ ಎರಡು ಪೆನ್ಷನ್ ಸಿಗುತ್ತಿತ್ತು. ಅವರು ಕಾಲವಾದ ನಂತರ ನಮ್ಮ ತಾಯಿಯವರಿಗೆ ಪೆನ್ಷನ್ ನೀಡಲಾಗುತ್ತಿತ್ತು. ಅವರು ಕಾಲವಾದ ನಂತರ ಸೇನಾ ನಿಯಮಾವಳಿ ಪ್ರಕಾರ ತಮಗೆ ನೀಡಬೇಕಾಗಿದ್ದು, ಆದರೆ ಅದನ್ನು 5 ವರ್ಷದಿಂದ ಸ್ಥಗಿತಗೊಳಿಸಲಾಗಿದೆ ಎಂದು ಮರಿಯಾ ಸಿಸಿಲಿಯಾ ಅವರು ದೂರಿದ್ದಾರೆ.

ಕೇಳಿದರೆ, ಸಿಎಫ್‌ಟಿಆರ್‌ಐನಿಂದ ಬರುವ ಪಿಂಚಣಿ ಮುಂದುವರೆಯುತ್ತಿದೆಯಾದ್ದರಿಂದ ಸೇನೆಯ ಪೆನ್ಷನ್ ಸ್ಥಗಿತಗೊಳಿಸಲಾಗಿದೆ ಎನ್ನುತ್ತಿದ್ದಾರೆ. ನಮ್ಮ ತೊಂದರೆ ಆಲಿಸಿದ ವಿ ಕೇರ್ ಎಕ್ಸ್-ಸರ್ವೀಸ್‍ಮನ್ ಟ್ರಸ್ಟ್‍ನ ಸುಬ್ರಮಣಿ, ನ್ಯಾಯ ಕೊಡಿಸಲು ಹೋರಾಡುತ್ತಿದ್ದಾರೆ ಎಂದೂ ಸಿಸಿಲಿಯಾ ಹೇಳಿದರು.

ಆರ್ಮಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಸಿದ್ದಪ್ಪಾಜಿ ಅವರು ತಮ್ಮ ಮಾನಿಟರಿ ಅಲೋಯನ್ಸ್‍ಗಾಗಿ ಅಲೆದಾಡುತ್ತಿದ್ದರೂ ಪ್ರಯೋಜನವಾಗಿಲ್ಲ. ಪ್ರತೀ ತಿಂಗಳೂ ಬರಬೇಕಾದ ಭತ್ಯೆಗಾಗಿ ತಾವು ಅದಾಲತ್‍ನಲ್ಲಿ ಭಾಗವಹಿಸಿರುವುದಾಗಿ ತಿಳಿಸಿದರು.
ವಿವಿಧ ಸಮಸ್ಯೆಗಳನ್ನೊತ್ತು ನೂರಾರು ಮಂದಿ ಇಂದು ಕಲಾಮಂದಿರದಲ್ಲಿ ನಡೆದ ಅದಾಲತ್ ಮೊರೆ ಹೋಗಿದ್ದು, ಬಹುತೇಕ ಮಂದಿಯ ಸಮಸ್ಯೆಗೆ ಪರಿಹಾರ ಸಿಕ್ಕಿದೆ ಎಂದು ಹೇಳಲಾಗಿದೆ.