ನಾಲ್ವರ ಸಜೀವ ದಹನ ಪ್ರಕರಣ: ಐವರಿಗೆ ಜೀವಾವಧಿ ಶಿಕ್ಷೆ

  • ತಲಾ 2 ಲಕ್ಷ ದಂಡ
  • ತಪ್ಪಿದಲ್ಲಿ 6 ತಿಂಗಳ ಸಜೆ

ಮೈಸೂರು, ಜೂ.25(ಎಸ್‍ಪಿಎನ್)-ಒಂದೇ ಕುಟುಂಬದ ನಾಲ್ವರ ಮೇಲೆ ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿ ಕೊಲೆ ಮಾಡಿ, ಮೂವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಐವರು ಆರೋಪಿಗಳಿಗೆ ಮೈಸೂರಿನ 4ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಠಿಣ ಜೀವಾವಧಿ ಶಿಕ್ಷೆ ಹಾಗೂ ತಲಾ 2 ಲಕ್ಷ ದಂಡ ವಿಧಿಸಿ ಮಂಗಳವಾರ ತೀರ್ಪು ನೀಡಿದೆ.

ಮೈಸೂರು ಕೆ.ಎನ್.ಪುರದ ನಿವಾಸಿಗಳಾದ ಹಸೀನಾ, ಆದಿಲ್, ಜಬೀನಾ, ಸಯೀದಾ ಹಾಗೂ ಜರೀನ್ ತಾಜ್ ಅವರು ಜೀವಾವಧಿ ಶಿಕ್ಷೆಗೊಳಗಾದ ವರು. ವಿಚಾರಣಾ ಹಂತದಲ್ಲಿ ಮತ್ತೊಬ್ಬ ಆರೋಪಿ ಕೌಸರ್ ಮೃತಪಟ್ಟಿದ್ದ ರಿಂದ ವಿಚಾರಣೆಯಿಂದ ಹೊರಗಿಡಲಾಗಿದೆ. ಘೋಷಿತ ಅಪರಾಧಿಗಳು ದಂಡ ಕಟ್ಟಲು ವಿಫಲರಾದಲ್ಲಿ 6 ತಿಂಗಳು ಹೆಚ್ಚುವರಿ ಶಿಕ್ಷೆ ಅನುಭವಿಸ ಬೇಕಿದೆ. ಉದಯಗಿರಿಯ ಕೆ.ಎನ್.ಪುರದ ನಿವಾಸಿಗಳಾದ ಹಸೀನಾ ಮತ್ತು ಅಪ್ಜಲ್‍ಪಾಷ ಕುಟುಂಬದವರ ನಡುವೆ ದ್ವೇಷವಿತ್ತು. 2014ರ ಮಾ.30 ರಂದು ತಡರಾತ್ರಿ ಎರಡು ಕುಟುಂಬಗಳ ನಡುವೆ ಜಗಳ ವಿಕೋಪಕ್ಕೆ ತಿರುಗಿ, ಅಪ್ಜಲ್ ಪಾಷ, ಶೀರಿನ್ ತಾಜ್, ಸೈಫ್, ಯೂಸೆಫ್ ದಾರುಣವಾಗಿ ಹತ್ಯೆ ಯಾಗಿದ್ದರು. ಇತರೆ ಸದಸ್ಯರಾದ ಮೈಫೂಸ್, ಯೂನಸ್, ಮಸೂದ್ ಅವರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.