`ಫ್ರೀ ಕಾಶ್ಮೀರ್’ ಫಲಕ ಪ್ರದರ್ಶನ ದೇಶದ್ರೋಹವಲ್ಲ

ಮೈಸೂರು,ಜ.22(ಎಂಟಿವೈ)- ಕಾಶ್ಮೀರದಲ್ಲಿ ಇಂದಿಗೂ ಭಯದ ವಾತಾವರಣವಿದೆ. ಅದನ್ನು ಹೋಗಲಾಡಿಸು ವಂತೆ ಯುವತಿ ನಳಿನಿ ಬಾಲ ಕುಮಾರ್ ಪ್ರತಿಭಟನೆಯಲ್ಲಿ `ಫ್ರೀ ಕಾಶ್ಮೀರ್’ ಫಲಕ ಪ್ರದರ್ಶಿಸಿದ್ದಾರೆ ಎಂದು ತಿಳಿದು ಬಂದಿದೆ. ಇದು ದೇಶದ್ರೋಹದ ಕೆಲಸವಲ್ಲ. ಆದರೆ ಆಕೆಯ ಪರ ವಕಾಲತ್ತು ವಹಿಸದಂತೆ ವಕೀಲರ ಸಂಘ ನಿರ್ಣಯ ಕೈಗೊಂಡಿರುವುದು ಅಸಂವಿಧಾನಿಕ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ರಾಮಕೃಷ್ಣನಗರದ ತಮ್ಮ ನಿವಾಸದ ಬಳಿ ಪತ್ರಕರ್ತ ರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಅವೈಜ್ಞಾನಿಕ ನಿಲುವಿನಿಂದಾಗಿ ಕಾಶ್ಮೀರದಲ್ಲಿ ಇಂದಿಗೂ ತುರ್ತು ಪರಿಸ್ಥಿತಿಯ ವಾತಾವರಣವಿದೆ. ಇದರಿಂದ ಅಲ್ಲಿನ ಜನ ಭಯದಲ್ಲಿದಿನ ದೂಡುವಂತಾಗಿದೆ. ಭಯ ಮುಕ್ತಗೊಳಿ ಸಬೇಕೆಂಬ ಭಾವನೆಯಿಂದ ನಳಿನಿ ಪ್ಲೇ ಕಾರ್ಡ್ ಪ್ರದರ್ಶಿಸಿ ದ್ದಾಳೆ. `ಫ್ರೀ ಕಾಶ್ಮೀರ್’ ಪ್ಲೇ ಕಾರ್ಡ್ ಪ್ರದರ್ಶಿಸಿದ್ದು ದೇಶ ದ್ರೋಹದ ಕೆಲಸವಲ್ಲ. ಈ ಪ್ರಕರಣದಲ್ಲಿ ಪ್ಲೇ ಕಾರ್ಡ್ ಪ್ರದರ್ಶಿ ಸಿದ ಯುವತಿ ನಳಿನಿ ಪರ ವಕಾಲತ್ತು ವಹಿಸದಂತೆ ಮೈಸೂರು ವಕೀಲರ ಸಂಘ ಕೈಗೊಂಡಿರುವ ನಿರ್ಧಾರ ಅಸಂವಿಧಾನಿಕವಾಗಿದೆ. ಇಂತಹ ನಿರ್ಧಾರ ತೆಗೆದುಕೊಳ್ಳಲು ವಕೀಲರ ಸಂಘಕ್ಕೆ ಅವಕಾಶವೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ವಕೀಲರ ಸಂಘ ನಿರ್ಣಯ ಪುನರ್ ಪರಿಶೀಲಿ ಸುವಂತೆ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ ಮನವಿ ಮಾಡಿದ್ದಕ್ಕೆ ಅವರ ಹಲ್ಲೆಗೆ ಯತ್ನ ನಡೆದಿದೆ. ಈ ವರ್ತನೆಯನ್ನು ನಾನು ಖಂಡಿಸುತ್ತೇನೆ ಎಂದರು.

ಸಮಗ್ರ ತನಿಖೆಯಾಗಲಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ವ್ಯಕ್ತಿ ಶರಣಾಗಿರುವ ಮಾಹಿತಿ ಲಭ್ಯವಾಗಿದೆ. ಆ ವ್ಯಕ್ತಿಯ ಬಗ್ಗೆ ಸಂಪೂರ್ಣ ಮಾಹಿತಿ ನನಗೆ ತಿಳಿದಿಲ್ಲ. ಪ್ರಕರಣದ ಕುರಿತಂತೆ ತನಿಖೆ ಆಗಬೇಕು. ಪ್ರಕರಣ ಉದ್ದೇಶ, ಸತ್ಯಾಸತ್ಯತೆ ತಿಳಿಯ ಬೇಕು ಎಂದು ಒತ್ತಾಯಿಸಿದರು.

ಸಾಲ ಬಲವಂತ ವಸೂಲಿ ಖಂಡನೀಯ: ರೈತರಿಂದ ಬಲ ವಂತವಾಗಿ ಸಾಲ ವಸೂಲಿ ಮಾಡುವ ಕಾರ್ಯ ಮಾಡ ಬಾರದು. ರೈತರು ತಾವಾಗಿಯೇ ವಾಪಸ್ ಕೊಟ್ಟರೆ ಪಡೆಯಲಿ. ಅದನ್ನು ಬಿಟ್ಟು ಒತ್ತಡ ಹೇರಬಾರದು. ಒಂದು ವೇಳೆ ಬಲವಂತದ ವಸೂಲಿಗೆ ಮುಂದಾದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ನಾನು ಮುಖ್ಯ ಮಂತ್ರಿ ಆಗಿದ್ದಾಗ ಬರದ ಹಿನ್ನೆಲೆಯಲ್ಲಿ ರೈತರಿಂದ ಬಲ ವಂತವಾಗಿ ಸಾಲ ವಸೂಲಿ ಮಾಡಬಾರದೆಂದು ಸೂಚಿ ಸಿದ್ದೆ. ಆದರೆ ಇದೀಗ ಬಿಜೆಪಿ ಸರ್ಕಾರ ರೈತರಿಂದ ಬಲವಂತ ವಾಗಿ ಸಾಲ ವಸೂಲಿ ಮಾಡಲು ಮುಂದಾಗಿದೆ. ರಾಜ್ಯ ಸರ್ಕಾರದ ಈ ನಿಲುವನ್ನು ಖಂಡಿಸುತ್ತೇನೆ ಎಂದರು.

ಎನ್‍ಆರ್‍ಸಿ, ಸಿಎಎಗೆ 13 ರಾಜ್ಯಗಳ ವಿರೋಧ: ಕೇಂದ್ರದ ಬಿಜೆಪಿ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಎನ್‍ಆರ್‍ಸಿ, ಸಿಎಎಗೆ ದೇಶದ 13 ರಾಜ್ಯಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ಬಿಹಾರ, ಅಸ್ಸಾಂ ಸೇರಿದಂತೆ ಹಲವು ರಾಜ್ಯಗಳು ಈ ಕಾಯ್ದೆ ಜಾರಿಗೊಳಿಸಲು ನಿರಾಕರಿಸಿವೆ. ಕೇಂದ್ರ ಸರ್ಕಾರ ರಾಜ್ಯಪಾಲ ರನ್ನು ಬಳಸಿ ಕೊಂಡು ಈ ಕಾಯ್ದೆ ಜಾರಿಗೊಳಿಸಲು ಹುನ್ನಾರ ನಡೆಸಿದೆ. ಇದರಿಂದಲೇ ವಿವಿಧ ರಾಜ್ಯ ಪಾಲರು ಕಾಯ್ದೆ ಜಾರಿಗೊಳಿಸುವಂತೆ ಹೇಳಿಕೆ ನೀಡುತ್ತಿದ್ದಾರೆ. ಆದರೆ ಚುನಾ ಯಿತ ಸರ್ಕಾರಗಳೇ ಪರಮೋಚ್ಛವಾಗಿದ್ದು, ಕೇಂದ್ರ ಸರ್ಕಾರ ನಿಯೋಜಿಸುವ ರಾಜ್ಯಪಾಲರು ಮುಖ್ಯವಲ್ಲ ಎಂದರು.

18 ಇಲಾಖೆಗೆ ಸಚಿವರಿಲ್ಲ: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನ ವಾಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 6 ತಿಂಗಳಾಗುತ್ತಿದೆ. ಮೊದಲ ಒಂದು ತಿಂಗಳು ಮುಖ್ಯಮಂತ್ರಿ ಹೊರತುಪಡಿಸಿ ಬೇರ್ಯಾವ ಮಂತ್ರಿಗಳು ಇರಲಿಲ್ಲ. ರಾಜ್ಯ ದಲ್ಲಿ ಬರ, ನೆರೆ ಪೀಡಿತ ಜನರಿಗೆ ಪರಿಹಾರ ನೀಡಲು ಸಾಧ್ಯವಾಗಿಲ್ಲ. ಸರ್ಕಾರ ಇದ್ದೂ ಇಲ್ಲದಂತಿದೆ. 18 ಇಲಾಖೆಗಳಿಗೆ ಸಚಿವರೇ ಇಲ್ಲ. ಇದರಿಂದ ಆ ಇಲಾಖೆಗಳ ಕೆಲಸ-ಕಾರ್ಯ ಸ್ಥಗಿತಗೊಂಡಿದೆ. ಅಭಿ ವೃದ್ಧಿ ಕುಂಠಿತಗೊಂಡಿದೆ ಎಂದು ಆರೋಪಿಸಿದರು.

ಸಂಪುಟ ವಿಸ್ತರಣೆಯಾದರೆ ಬಿಜೆಪಿಯಲ್ಲಿ ಅಸಮಾ ಧಾನ ಭುಗಿಲೇಳಲಿದೆ: ಮಂತ್ರಿ ಆಗುವ ಕನಸು ಕಂಡು ಕಾಂಗ್ರೆಸ್ ಮತ್ತು ಜೆಡಿಎಸ್‍ನಿಂದ ಪಕ್ಷಾಂತರ ಮಾಡಿ, ಬಿಜೆಪಿ ಸೇರಿರು ವವರ ಸ್ಥಿತಿ ಹೇಳತೀರದ್ದಾಗಿದೆ. ಇಂದು ಮಂತ್ರಿಯಾಗುತ್ತೇವೆ, ನಾಳೆ ಮಂತ್ರಿಯಾಗುತ್ತೇವೆ ಎಂಬ ಆಸೆಯಿಂದ ಕಾಯು ವಂತಾಗಿದೆ. ಕೆಲವರು ಕನಸಲ್ಲೇ ಮಂತ್ರಿಯಾದವರಂತೆ ಕನ ವರಿಸುತ್ತಿದ್ದಾರೆ. ನಮಗೆ ಬಂದ ಮಾಹಿತಿಯಂತೆ ಮಂತ್ರಿ ಮಂಡಲ ವಿಸ್ತರಣೆ ಯಾದರೇ ಅತೃಪ್ತರ ಅಸಮಾಧಾನ ಸ್ಫೋಟಗೊಂಡು, ಅಲ್ಲೋಲ ಕಲ್ಲೋಲ ಸೃಷ್ಟಿಯಾಗಲಿದೆ. ಇದನ್ನು ಅರಿ ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂತ್ರಿ ಮಂಡಲ ವಿಸ್ತರಣೆಗೆ ಹಿಂದೇಟು ಹಾಕುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಎ.ಆರ್.ಕೃಷ್ಣ ಮೂರ್ತಿ, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಡಾ. ಬಿ.ಜೆ.ವಿಜಯ ಕುಮಾರ್, ತಾ.ಪಂ ಸದಸ್ಯ ಕುಮಾರ್, ಮುಖಂಡ ರಾದ ಸಿದ್ದರಾಮೇಗೌಡ, ಕೆ.ಎಸ್.ಶಿವರಾಮು ಸೇರಿ ದಂತೆ ಇನ್ನಿತರರು ಉಪಸ್ಥಿತರಿದ್ದರು.