ಕೃಷ್ಣ ಆಸ್ಪತ್ರೆಯಿಂದ 575 ಸೋಂಕಿತರಿಗೆ ಉಚಿತ ಚಿಕಿತ್ಸೆ

ನಂಜನಗೂಡು, ಜು.17- ಕೊರೊನಾ 2ನೇ ಅಲೆ ಸಂದರ್ಭ ನಗರದ ಕೃಷ್ಣ ಆಸ್ಪತ್ರೆ ವತಿಯಿಂದ 575 ಕೋವಿಡ್ ಸೋಂಕಿತರಿಗೆ ಆಯುಷ್ಮಾನ್ ಯೋಜನೆಯಡಿ ಉಚಿತ ಚಿಕಿತ್ಸೆ ನೀಡಲಾಗಿದೆ ಎಂದು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಗೀತಾ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಕೋವಿಡ್ ಸಂದರ್ಭ ಕೃಷ್ಣ ಆಸ್ಪತ್ರೆಯ ಶೇ.50ರಷ್ಟು ಹಾಸಿಗೆಗಳನ್ನು ಜಿಲ್ಲಾಡಳಿತದ ವಶಕ್ಕೆ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದರು. ಆದರೆ ನಂಜನಗೂಡು ತಾಲೂಕಿನಲ್ಲಿ ಕೋವಿಡ್ ಸೋಂಕು ವ್ಯಾಪಕವಾಗಿ ಹರಡಿದ್ದರಿಂದ ತಾಲೂಕಿನ ಜನತೆಗೆ ನೆರವಾಗುವ ನಿಟ್ಟಿನಲ್ಲಿ ಕಡಕೊಳ ಸಮೀಪ ಕೆಇಬಿ ಇಂಜಿನಿಯರ್ಸ್ ಅಸೋಷಿಯೇಷನ್ ಕಟ್ಟಡವನ್ನು ಬಾಡಿಗೆ ಪಡೆದು 28 ಐಸಿಯು ಹಾಗೂ 121 ಹಾಸಿಗೆಯುಳ್ಳ ಸುಸಜ್ಜಿತ ಕೋವಿಡ್ ಕೇರ್ ಆಸ್ಪತ್ರೆ ತೆರೆದು ಗುಣಮಟ್ಟದ ಚಿಕಿತ್ಸೆ ನೀಡಲಾಯಿತು. ನಮ್ಮ ಆಸ್ಪತ್ರೆಯ ಚಿಕಿತ್ಸಾ ವಿಧಾನ ಹಾಗೂ ಆರೈಕೆ ಬಗ್ಗೆ ಮೆಚ್ಚುಗೆ ಕಂಡು ನೆರೆ ಜಿಲ್ಲೆಯ ವಿವಿಧೆಡೆಯಿಂದಲೂ ಸೋಂಕಿತರು ಚಿಕಿತ್ಸೆ ದಾಖಲಾಗಿ ನೆರವು ಪಡೆದಿದ್ದಾರೆ ಎಂದರು.

ಆಕ್ಸಿಜನ್ ಕೊರತೆ ಉಂಟಾಗದಂತೆ ಶಾಸಕ ಬಿ.ಹರ್ಷವರ್ಧನ್ ನೆರವಿಗೆ ನಿಲ್ಲುವ ಮೂಲಕ ಸಮಸ್ಯೆ ಎದುರಾಗದಂತೆ ನೋಡಿಕೊಂಡಿ ದ್ದಾರೆ. 3ನೇ ಅಲೆ ಮಕ್ಕಳಲ್ಲಿ ಸೋಂಕು ಕಾಣಿಸಿಕೊಳ್ಳಲಿದೆ ಎಂಬ ಆತಂಕ ಜನರಲ್ಲಿ ಮೂಡಿದೆ. 3ನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ಕೃಷ್ಣ ಆಸ್ಪತ್ರೆ ನುರಿತ ಮಕ್ಕಳ ತಜ್ಞರನ್ನು ನಿಯೋಜಿಸಿ ಕೊಂಡು ಸಕಲ ವ್ಯವಸ್ಥೆ ಮಾಡಿಕೊಂಡು ಸಜ್ಜಾಗಿದೆ ಎಂದರು.

ಡಯಾಲಿಸಿಸ್‍ಗಾಗಿ ಮೈಸೂರಿಗೆ ಅಲೆಯುವ ಪರದಾಟ ತಪ್ಪಿಸುವ ನಿಟ್ಟಿನಲ್ಲಿ ಕೃಷ್ಣ ಆಸ್ಪತ್ರೆಯಲ್ಲಿ ಡÀಯಾಲಿಸಿಸ್ ಕೇಂದ್ರ ತೆರೆಯಲು ಆಡಳಿತ ಮಂಡಳಿ ಮುಂದಾಗಿದ್ದು ಮುಂದಿನ ದಿನಗಳಲ್ಲಿ ಇದರ ಸೇವೆ ಲಭ್ಯವಾಗಲಿದೆ ಎಂದರು. ಗೋಷ್ಠಿಯಲ್ಲಿ ಆಸ್ಪತ್ರೆ ಆಡಳಿತಾಧಿಕಾರಿ ಪವನ್ ಕುಮಾರ್ ಹಾಜರಿದ್ದರು.