ಫಾರಂಹೌಸ್‍ನಲ್ಲಿ ಗೆಳೆಯನ ಹತ್ಯೆ ಪ್ರಕರಣ ಆರೋಪಿಗಳಿಬ್ಬರು ಪೊಲೀಸ್ ವಶಕ್ಕೆ ; ತೀವ್ರ ವಿಚಾರಣೆ

ಮೈಸೂರು: ಮೈಸೂರು ತಾಲೂಕು, ಎಂಸಿ ಹುಂಡಿ ಬಳಿ ಫಾರಂ ಹೌಸ್‍ನಲ್ಲಿ ಭಾನುವಾರ ನಡೆದ ಪ್ರಶಾಂತ ಎಂಬ ಯುವಕನ ಹತ್ಯೆ ಪ್ರಕರಣ ಸಂಬಂಧ ವರುಣಾ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಎಂಸಿ ಹುಂಡಿ ಗ್ರಾಮದ ಲೋಕೇಶ ಹಾಗೂ ಪ್ರಮೋದಾ ಬಂಧಿತರಾಗಿದ್ದು, ತಲೆ ಮರೆಸಿಕೊಂಡಿದ್ದ ಕೊಲೆಗಡುಕರನ್ನು ಇಂದು ಬೆಳಿಗ್ಗೆ ಬೆಂಗಳೂರಿನ ಹೊರ ವಲಯದಲ್ಲಿ ಪೊಲೀಸರು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಮೈಸೂರು ದಕ್ಷಿಣ ಗ್ರಾಮಾಂತರ ಠಾಣೆ ಸರ್ಕಲ್ ಇನ್‍ಸ್ಪೆಕ್ಟರ್ ಕರೀಂ ರಾವ್‍ತರ್ ನೇತೃತ್ವದಲ್ಲಿ ರಚಿಸಿದ್ದ ವಿಶೇಷ ತನಿಖಾ ತಂಡದ ಪೊಲೀಸರು, ಭಾನುವಾರ ರಾತ್ರಿಯೇ ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದರಾದರೂ ಮೊಬೈಲ್ ಸ್ವಿಚ್ ಆಫ್ ಆಗಿದ್ದುದರಿಂದ ಅವರ ಟವರ್ ಲೋಕೇಷನ್ ಮಾಹಿತಿ ಪಡೆದು ಕಡೆಗೂ ಇಂದು ಬಂಧಿಸುವಲ್ಲಿ ಯಶಸ್ವಿಯಾದರು.

ಭಾನುವಾರ ರಾತ್ರಿ ಎಂಸಿ ಹುಂಡಿ ಗ್ರಾಮದ ತೋಟದ ಮನೆಯಲ್ಲಿ ಪ್ರಮೋದ ಮತ್ತು ಲೋಕೇಶ ಮಚ್ಚಿನಿಂದ ಮನಸ್ಸೋ ಇಚ್ಛೆ ಹಲ್ಲೆ ನಡೆಸಿ, ಕೊಚ್ಚಿ ಪ್ರಶಾಂತನನ್ನು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು.

ಫಾರಂ ಹೌಸ್‍ನಲ್ಲೇ ಕೆಲಸ ಮಾಡಿಕೊಂಡಿದ್ದ ಕಿರಣ್ ಎದುರೇ ನಡೆದ ಕೃತ್ಯದ ಬಗ್ಗೆ ಆತ ಪೊಲೀಸರಿಗೆ ತಿಳಿಸಿದ್ದ. ಘಟನಾ ಸ್ಥಳಕ್ಕೆ ತೆರಳಿದ್ದ ವರುಣಾ ಠಾಣೆ ಪೊಲೀಸರು, ಮಹಜರು ನಡೆಸಿ ಕೊಲೆಗೆ ಬಳಸಿದ್ದ ಮಚ್ಚುಗಳನ್ನು ವಶಪಡಿಸಿಕೊಂಡಿದ್ದರು.

ಮೂಲತಃ ಎಂಸಿ. ಹುಂಡಿ ಗ್ರಾಮದವನಾದ ಲೋಕೇಶ್, ಫಾರಂ ಮಾಲೀಕ ಪ್ರಶಾಂತನೊಂದಿಗಿದ್ದ. ಪ್ರಶಾಂತನ ವ್ಯವಹಾರವೆಲ್ಲವನ್ನು ತಿಳಿದಿದ್ದ. ವಾರದ ಹಿಂದಷ್ಟೇ ತನಗೆ ಹಣ ಬೇಕೆಂದು ಕೇಳಿದ್ದ ಲೋಕೇಶನಿಗೆ ಸತಾಯಿಸುತ್ತಾ ಬಂದಿದ್ದರಿಂದ ರೊಚ್ಚಿಗೆದ್ದು ಪ್ರಶಾಂತನನ್ನು ಮುಗಿಸಲು ನಿರ್ಧರಿಸಿದ್ದ. ಅದೇ ಫಾರಂನಲ್ಲಿ ದನ ಮೇಯಿಸಿಕೊಂಡಿದ್ದ ಪ್ರಮೋದನನ್ನು ಪುಸಲಾಯಿಸಿ ಭಾನುವಾರ ರಾತ್ರಿ ಹತ್ಯೆಗೈಯ್ಯಲು ಮುಹೂರ್ತ ನಿಗದಿ ಮಾಡಿದ್ದ ಲೋಕೇಶ, ಪೂರ್ವ ನಿಗದಿ ಯಂತೆ ಕಾರ್ಯಸಾಧಿಸಿ ತಲೆಮರೆಸಿಕೊಂಡಿದ್ದ ಎಂದು ಮೂಲಗಳು ತಿಳಿಸಿವೆ.

ವಶದಲ್ಲಿರುವ ಕೊಲೆ ಆರೋಪಿಗಳನ್ನು ತೀವ್ರ ವಿಚಾರಣೆಗೊಳಪಡಿಸಿರುವ ಪೊಲೀಸರು, ಅಗತ್ಯ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದಾರೆ. ನಾಳೆ (ಜ.10) ಅವರನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸುವ ಸಾಧ್ಯತೆ ಇದೆ.