ಮೈಸೂರು: ಮೈಸೂರಿನ ಮೃಗಾಲಯದಲ್ಲಿ ಈ ಸಾಲಿನ ಮಕ್ಕಳ ಬೇಸಿಗೆ ಶಿಬಿರ ನಾಳೆ(ಏ.21) ಬೆಳಿಗ್ಗೆ 10ಕ್ಕೆ ಆರಂಭವಾಗಲಿದೆ. ಮೃಗಾಲಯದ ಆವರಣದಲ್ಲಿರುವ ಆಡಿಟೋರಿಯಂನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕೇಂದ್ರ ಮೃಗಾಲಯ ಪ್ರಾಧಿಕಾರದ ಸದಸ್ಯ ಸಿ.ಎಸ್. ಯಾಲಕ್ಕಿ ಹಾಗೂ ಪ್ರಾದೇಶಿಕ ಪ್ರಾಕೃತಿಕ ವಸ್ತು ಸಂಗ್ರಹಾಲಯದ ಮುಖ್ಯಸ್ಥ ಡಾ.ಜಿ.ಎನ್. ಇಂದ್ರೇಶ್ ಪಾಲ್ಗೊಳ್ಳಲಿದ್ದಾರೆ. ಮೊದಲನೇ ತಂಡದ ಶಿಬಿರ ಏ.21ರಿಂದ 30ರವರೆಗೆ, 2ನೇ ತಂಡದ ಶಿಬಿರ ಮೇ 5ರಿಂದ 14ರವರೆಗೆ ನಡೆಯಲಿದೆ. ಪ್ರತೀ ದಿನ 9.30ರಿಂದ ಸಂಜೆ 4.30ರವರೆಗೆ ತರಗತಿ ನಡೆಯಲಿದ್ದು, ಒಂದೊಂದು ತಂಡದಲ್ಲಿ 65 ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆ, ಪ್ರಾಣಿ-ಪಕ್ಷಿ ಸಂಕುಲಗಳ ಬಗ್ಗೆ ತಿಳುವಳಿಕೆ, ಮೃಗಾಲಯದ ವನ್ಯಜೀವಿಗಳ ಪರಿಚಯ, ಪಕ್ಷಿ ವೀಕ್ಷಣೆ, ಕಾರಂಜಿ ಕೆರೆ ವೀಕ್ಷಣೆ, ಪ್ರಾದೇಶಿಕ ಪ್ರಾಕೃತಿಕ ಸಂಗ್ರಹಾಲಯಕ್ಕೆ ಭೇಟಿ, ವನ್ಯಜೀವಿಗಳ ಕಾನೂನು, ಪ್ರಾಣಿಗಳ ವರ್ತನೆ ಹಾಗೂ ಗಿಡ-ಮರಗಳ ಗುರುತಿಸುವಿಕೆ ಹೇಳಿಕೊಡಲಾಗುತ್ತದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಎಂ.ಕುಲಕರ್ಣಿ ತಿಳಿಸಿದ್ದಾರೆ.