ಜೂಜಾಟ: 6 ಮಂದಿ ಬಂಧನ 4 ಲಕ್ಷ ನಗದು, 12 ದ್ವಿಚಕ್ರ ವಾಹನ ವಶ

ಮೈಸೂರು: ಜೂಜಾಟದಲ್ಲಿ ತೊಡಗಿದ್ದ 6 ಮಂದಿಯನ್ನು ಬಂಧಿಸಿರುವ ಜಿಲ್ಲಾ ಅಪರಾಧ ಗುಪ್ತಚರ ವಿಭಾಗದ ಪೊಲೀಸರು, ಪಣಕ್ಕಿಟ್ಟಿದ್ದ ಸುಮಾರು 4 ಲಕ್ಷ ರೂ. ಹಣ ಹಾಗೂ 12 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಇಲವಾಲ ಪೊಲೀಸ್ ಠಾಣಾ ವ್ಯಾಪ್ತಿಯ ಯಲಚನಹಳ್ಳಿ ಬಳಿಯಿರುವ ಕರ್ನಾಟಕ ಗೃಹಮಂಡಳಿಗೆ ಸೇರಿದ ಖಾಲಿ ಜಾಗದಲ್ಲಿ ಗುರುವಾರ ರಾತ್ರಿ ಜೂಜಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ತಿಳಿದ ಪೊಲೀಸರು ದಾಳಿ ನಡೆಸಿ, ಸುತ್ತಮುತ್ತಲ ಗ್ರಾಮದವರಾದ ಕುಮಾರ್, ನಾಗರಾಜು, ಮಹೇಶ್, ಎನ್.ಕುಮಾರ್, ಆನಂದ ಹಾಗೂ ಬೋರ ಅಲಿಯಾಸ್ ಮನು ಅವರನ್ನು ಬಂಧಿಸಿ, 4,11,500 ರೂ. ಹಣ ಹಾಗೂ ಸ್ಥಳದಲ್ಲಿದ್ದ 12 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಮತ್ತಷ್ಟು ಮಂದಿ ಪರಾರಿಯಾಗಿದ್ದು, ಈ ಸಂಬಂಧ ಇಲವಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ(ಇನ್‍ಚಾರ್ಜ್) ಧರ್ಮೇಂದ್ರಕುಮಾರ್ ಮೀನಾ ಹಾಗೂ ಎಎಸ್‍ಪಿ ಅಯ್ಯಪ್ಪ ಮಾರ್ಗದರ್ಶನದಲ್ಲಿ ಜಿಲ್ಲಾ ಅಪರಾಧ ಗುಪ್ತಚರ ವಿಭಾಗದ ಇನ್ಸ್‍ಪೆಕ್ಟರ್ ಮಹದೇವಯ್ಯ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಸುನೀಲ್, ಸಂದೀಪ್, ರಾಮ್‍ಪ್ರಸಾದ್, ಚಿಕ್ಕಲಿಂಗು ಪಾಲ್ಗೊಂಡಿದ್ದರು.