ಮೈಸೂರಿನ ನೂರೊಂದು ಗಣಪತಿ ದೇವಸ್ಥಾನದಲ್ಲಿ ಇಂದಿನಿಂದ ಗಣೇಶೋತ್ಸವ

ಇಂದು ಮಹಾ ರುದ್ರಾಭಿಷೇಕ, ವಿಶೇಷ ಹೂವಿನ ಅಲಂಕಾರ
ಮೈಸೂರು:  ಮೈಸೂರಿನ ಕೆ.ಆರ್.ಮೊಹಲ್ಲಾ, ತ್ಯಾಗರಾಜ ರಸ್ತೆ ನೂರೊಂದು ಗಣಪತಿ ದೇವಸ್ಥಾನದಲ್ಲಿ ಸೆ.12 ರಿಂದ 16ರವರೆಗೆ 64ನೇ ವಾರ್ಷಿಕೋತ್ಸವ, ಗಣೇಶ ಹಬ್ಬದ ಪೂಜಾ ಮಹೋತ್ಸವ ನಡೆಯಲಿದೆ.
ಸೆ.13ರಂದು ಪ್ರಾತಃಕಾಲದಲ್ಲಿ ದೇವತಾ ಪ್ರಾರ್ಥನೆ, ನೂರೊಂದು ಗಣಪತಿಗೆ ತೈಲಾಭಿಷೇಕ, ಕ್ಷೀರಾಭಿ ಷೇಕ, ಮಹಾರುದ್ರಾಭಿಷೇಕ, ವಿಶೇಷ ಹೂವಿನ ಅಲಂಕಾರ, ಮಹಾನೈವೇದ್ಯ ನಡೆಯಲಿದೆ. ಸಂಜೆ 4 ಗಂಟೆಗೆ ವಿಶೇಷ ಪೂಜಾ ಕಾರ್ಯಗಳು ನೆರ ವೇರಲಿವೆ. ಗಣೇಶ ಮಹೋತ್ಸವದ ಅಂಗವಾಗಿ ಪ್ರತಿದಿನ ಸಂಜೆ 7 ಗಂಟೆಗೆ ಸಾಂಸ್ಕøತಿಕ ಕಾರ್ಯಕ್ರಮ ಗಳನ್ನು ಏರ್ಪಡಿಸಲಾಗಿದೆ. ಸೆ.14ರಂದು ರಮ್ಯಶ್ರೀ ಮತ್ತು ಎಂ.ಎಸ್.ಸಾಗರ್ ಅವರಿಂದ ಸ್ಯಾಕ್ಸೋಫೋನ್ ವಾದನ, 15ರಂದು ನಂದಿನಿ ನೃತ್ಯಾಲಯದ ಮಕ್ಕಳಿಂದ ಭರತ ನಾಟ್ಯ, 16ರಂದು ಸುಮಾ ವಸಂತ್ ಸಂಗಡಿಗರಿಂದ ಭಕ್ತಿಗೀತೆಗಳ ಗಾಯನ ನಡೆಯಲಿದೆ ಎಂದು ನೂರೊಂದು ಗಣಪತಿ ದೇವಸ್ಥಾನದ ಪ್ರಧಾನ ಅರ್ಚಕ ಡಾ.ವಿದ್ವಾನ್ ಸುನೀಲ್‍ಕುಮಾರ್ ಶಾಸ್ತ್ರಿ ತಿಳಿಸಿದ್ದಾರೆ.

ಗೌರಿ-ಗಣೇಶ ಮೂರ್ತಿಗಳನ್ನು ವಿಸರ್ಜಿಸಲು ವ್ಯವಸ್ಥೆ
ಮೈಸೂರು:  ಗೌರಿ-ಗಣೇಶ ಮೂರ್ತಿಗಳನ್ನು ಕೆರೆ, ಬಾವಿ ಮತ್ತು ಹರಿಯುವ ಕಾಲುವೆ, ನದಿಗಳಲ್ಲಿ ವಿಸರ್ಜಿಸಬಾರದೆಂದು ಮೈಸೂರು ಮಹಾನಗರ ಪಾಲಿಕೆ ಕಮೀಷ್ನರ್ ಕೆ.ಹೆಚ್.ಜಗದೀಶ್ ತಿಳಿಸಿದ್ದಾರೆ.

ಮೂರ್ತಿಗಳನ್ನು ವಿಸರ್ಜಿಸಲು ನಗರ ಪಾಲಿಕೆಯಿಂದ 9 ಟಾಟಾ ಏಸ್ ವಾಹನ ಗಳನ್ನು ಸೆಪ್ಟೆಂಬರ್ 13, ಸೆಪ್ಟೆಂಬರ್ 15 ಮತ್ತು ಸೆಪ್ಟೆಂಬರ್ 17ರಂದು ಸಂಜೆ 7ರಿಂದ ರಾತ್ರಿ 10 ಗಂಟೆವರೆಗೆ ಈ ಕೆಳಕಂಡ ಸ್ಥಳಗಳ ಬಳಿ ವ್ಯವಸ್ಥೆ ಮಾಡಲಾಗಿದೆ.
ನೀರಿನ ಟ್ಯಾಂಕರ್‍ಗಳನ್ನು ಹೊತ್ತ ವಾಹನಗಳು ಫ್ರೀಡಂ ಪಾರ್ಕ್, ಟೌನ್ ಹಾಲ್, ಕುವೆಂಪು ಸರ್ಕಲ್, ಹೆಬ್ಬಾಳು ಸಿಐಟಿಬಿ ಛತ್ರ, ಆರ್‍ಎಂಸಿ ಸರ್ಕಲ್, ದೋಬಿ ಘಾಟ್, 101 ಗಣಪತಿ ಸರ್ಕಲ್, ಸ್ಟರ್ಲಿಂಗ್ ಟಾಕೀಸ್, ಟೆರೇಷಿಯನ್ ಕಾಲೇಜು, ರಾಜೇಂದ್ರನಗರ ಸರ್ಕಲ್, ಫೌಂಟನ್ ಸರ್ಕಲ್, ಗಾಯಿತ್ರಿಪುರಂನ ಮಾನಸ ಸ್ಕೂಲ್ ಬಳಿ, ಒಂಟಿಕೊಪ್ಪಲು ದೇವಸ್ಥಾನ, ವಿವೇಕಾನಂದ ಸರ್ಕಲ್, ರಾಮಕೃಷ್ಣ ಪರಮಹಂಸ ಸರ್ಕಲ್, ಶಾರದಾದೇವಿನಗರ ಸರ್ಕಲ್, ಬಲ್ಲಾಳ್ ಸರ್ಕಲ್ ಹಾಗೂ ಗೊಬ್ಬಳಿ ಮರ ಸರ್ಕಲ್ ಬಳಿ ಇರುತ್ತವೆ.

ಕೃತಕ ಕೊಳಗಳು: ಗೌರಿ-ಗಣಪತಿ ವಿಗ್ರಹಗಳನ್ನು ವಿಸರ್ಜಿಸಲು ಪಾಲಿಕೆಯಿಂದ ಟೌನ್ ಹಾಲ್, ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನ, ಆರ್‍ಎಂಸಿ ಸರ್ಕಲ್, ಹೆಬ್ಬಾಳಿನ ಬಸವನಗುಡಿ ಸರ್ಕಲ್, ದೋಬಿ ಘಾಟ್ ಹಾಗೂ ಈಜುಕೊಳದ ಬಳಿ ಕೃತಕ ಕೊಳಗಳನ್ನು ನಿರ್ಮಿಸಲಾಗಿದೆ.