ನೀರು ಕೇಳುವ ನೆಪದಲ್ಲಿ ಮಹಿಳೆ ಸರ ಎಗರಿಸಿ ಪರಾರಿ

ಇಬ್ಬರು ಅಪರಿಚಿತರಿಂದ ನಜರ್‍ಬಾದ್‍ನಲ್ಲಿ ಮುಂಜಾನೆ ಘಟನೆ
ಮೈಸೂರು: ಬಾಟಲಿ ಹಿಡಿದು ನೀರು ಕೇಳಲು ಬಂದು ಮಹಿಳೆಯ ಮಾಂಗಲ್ಯ ಸರ ಎಗರಿಸಿ ಪರಾರಿಯಾಗಿರುವ ಘಟನೆ ಮೈಸೂರಿನ ನಜರ್‍ಬಾದ್‍ನಲ್ಲಿ ಇಂದು ಮುಂಜಾನೆ ಸಂಭವಿಸಿದೆ.

ಮೈಸೂರಿನ ನಜರ್‍ಬಾದ್‍ನ ಕಾಮಟಗೇರಿಯ ಮರುಗಾದೇವಿ ದೇವಸ್ಥಾನದ ನಿವಾಸಿ ಶ್ರೀಮತಿ ಪಾಪಮ್ಮ (ಪಾಪಚಿ) ಎಂಬ 45 ವರ್ಷ ಮಹಿಳೆ ಸರ ಕಳೆದು ಕೊಂಡವರು. ಮನೆ ಮುಂದಿನ ನಲ್ಲಿಯಲ್ಲಿ ನೀರು ಹಿಡಿಯುತ್ತಿದ್ದ ವೇಳೆ ಬೈಕ್‍ನಲ್ಲಿ ಬಂದ ಅಪರಿಚಿತರಿಬ್ಬರ ಪೈಕಿ ಓರ್ವ ಬಾಟಲಿ ಹಿಡಿದು ನೀರು ತೆಗೆದುಕೊಳ್ಳು ತ್ತೇನೆಂದು ಕೇಳಿದ. ನಂಬಿದ ಪಾಪಮ್ಮ ಪಕ್ಕಕ್ಕೆ ಸರಿದು ನೀರು ಹಿಡಿದುಕೊಳ್ಳಲು ಹೇಳಿದರು. ನಲ್ಲಿ ಕೆಳಗೆ ಬಾಟಲಿ ಇರಿಸಿದ ಆತ, ತಕ್ಷಣ ಪಾಪಮ್ಮರ ಬಾಯಿ ಅದುಮಿ ಮತ್ತೊಂದು ಕೈನಿಂದ ಆಕೆ ಕೊರಳಲ್ಲಿದ್ದ ಮಾಂಗಲ್ಯ ಸರ ಎಗರಿಸಿ ಆನ್‍ನಲ್ಲಿದ್ದ ಬೈಕ್‍ನಲ್ಲಿ ಕುಳಿತು ಮುಂಜಾನೆ 5.45ಗಂಟೆ ವೇಳೆಗೆ ಪರಾರಿಯಾಗಿದ್ದಾರೆ.

15 ಗ್ರಾಂ ತೂಕದ ಮಾಂಗಲ್ಯ ಹಾಗೂ ಲಕ್ಷ್ಮಿ ಕಾಸುಗಳು ಚಿನ್ನದ ಆಭರಣದ ಜೊತೆಗೆ ಚಿನ್ನದ ಲೇಪನವುಳ್ಳ ಬೆಳ್ಳಿ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಘಟನೆ ನಡೆದ ತಕ್ಷಣ ಪಾಪಮ್ಮ ಅವರು ಕೂಗಿಕೊಂಡರಾದರೂ ಇನ್ನೂ ಕತ್ತಲೆ ಆವರಿಸಿದ್ದರಿಂದ ಯಾರೂ ಅವರ ಸಹಾಯಕ್ಕೆ ಬಾರಲಿಲ್ಲ ಎನ್ನಲಾಗಿದೆ.ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದಾವಿಸಿದ ನಜರ್‍ಬಾದ್ ಠಾಣೆ ಪೊಲೀಸರು ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.