ರಾಜ್ಯದ ಸರ್ಕಾರಿ ಶಾಲೆಗಳಿಗೆ ದಸರಾ ರಜೆ 8 ದಿನ ಕಡಿತಕ್ಕೆ ಸರ್ಕಾರ ನಿರ್ಧಾರ

ಬೆಂಗಳೂರು: ಈ ವರ್ಷ ಕರ್ನಾಟಕ ಸರ್ಕಾರದಡಿಯಲ್ಲಿ ಬರುವ ಶಾಲೆಗಳಿಗೆ ದಸರಾ ರಜೆ ದಿನಗಳು ಕಡಿಮೆಯಾಗಲಿವೆ.

ಈ ವರ್ಷ 8 ದಿನಗಳ ದಸರಾ ರಜೆ ಕಡಿತಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ, ಪ್ರವಾಹದಿಂದಾಗಿ ಹಲವು ರಜೆಗಳನ್ನು ನೀಡಬೇಕಾಗಿ ಬಂದಿದ್ದರಿಂದ ದಸರಾ ರಜೆಯನ್ನು ಕಡಿತ ಮಾಡಲು ಸರ್ಕಾರ ನಿರ್ಧರಿಸಿದೆ.

ಶೈಕ್ಷಣಿಕ ಕ್ಯಾಲೆಂಡರ್ ಪ್ರಕಾರ ದಸರಾ ರಜೆ ಅಕ್ಟೋಬರ್ 8ರಿಂದ 21ರವರೆಗೆ ಇರುತ್ತದೆ. ಕಳೆದ ವರ್ಷ ವಿದ್ಯಾರ್ಥಿಗಳಿಗೆ 22 ದಿನ ದಸರಾ ರಜೆ ಇತ್ತು. ಆದರೆ ಈ ವರ್ಷ 14 ದಿನ ನೀಡಲಾಗುತ್ತದೆ. ಒಟ್ಟಾರೆ 8 ದಿನಗಳ ದಸರಾ ರಜೆ ಕಡಿತವಾಗುತ್ತಿದ್ದು ಸರ್ಕಾರದ ಈ ನಿರ್ಧಾರಕ್ಕೆ ಶಿಕ್ಷಕ ವೃಂದದಿಂದ ವಿರೋಧ ವ್ಯಕ್ತವಾಗಿದೆ. ಶಿಕ್ಷಕರಿಗೆ ತಮ್ಮ ಮಕ್ಕಳು ಮತ್ತು ಕುಟುಂಬದವರ ಜೊತೆ ಸಮಯ ಕಳೆಯಬೇಕು, ಅದಕ್ಕಾಗಿ ನಿಗದಿತ ರಜೆ ನೀಡಲೇಬೇಕು ಎನ್ನುತ್ತಾರೆ ಕರ್ನಾಟಕ ಹೈಸ್ಕೂಲ್ ಅಧ್ಯಾಪಕರ ಒಕ್ಕೂಟದ ಅಧ್ಯಕ್ಷ ಹೆಚ್ ಕೆ ಮಂಜುನಾಥ್.

ಕ್ಷಣ ಇಲಾಖೆಯ ಸೂಚನೆಯನ್ನು ಅನುಸರಿಸದಿರಲು ಖಾಸಗಿ ಶಾಲೆಗಳು ನಿರ್ಧರಿಸಿವೆ. ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಾ ಶಶಿಕುಮಾರ್ ಪ್ರತಿಕ್ರಿಯೆ ನೀಡಿ, ನಮಗೆ ಸಾಕಷ್ಟು ಶಾಲಾ ಅವಧಿಗಳು ಸಿಗುತ್ತವೆ. ಮಳೆಯಿಂದ ಪರಿಣಾಮಕ್ಕೀಡಾದ ಜಿಲ್ಲೆಗಳಿಗೆ ಮಾತ್ರ ಸರ್ಕಾರ ರಜೆ ಕಡಿತ ಮಾಡಲಿ, ಎಲ್ಲಾ ಜಿಲ್ಲೆಗಳಿಗೆ ಬೇಡ ಎಂದು ಹೇಳಿದ್ದಾರೆ.