ಪಾರಂಪರಿಕ ಪ್ರಜ್ಞೆ ಇಲ್ಲದೆ ಸರ್ಕಾರಿ ಅತಿಥಿಗೃಹದ ಹೆಬ್ಬಾಗಿಲ ನವೀಕರಣ ಕಾಮಗಾರಿ ಸಂರಕ್ಷಣೆ ಬದಲು ಸರ್ವನಾಶ ಪ್ರಯತ್ನ…!

ಮೈಸೂರು: ಮೈಸೂರಿನಲ್ಲಿ ಪಾರಂಪರಿಕ ಕಟ್ಟಡಗಳನ್ನು ಉಳಿಸಿಕೊಳ್ಳುವ ಪ್ರಯತ್ನದ ನಡುವೆ ಇದಕ್ಕೆ ತದ್ವಿರುದ್ಧವಾದ ಕೃತ್ಯವನ್ನು ರಾಜಾರೋಷವಾಗಿ ನಡೆಸಲಾಗುತ್ತಿದೆ. ಮೈಸೂರಿನ ಸರ್ಕಾರಿ ಅತಿಥಿಗೃಹ, ಪ್ರವೇಶ ದ್ವಾರ ಹಾಗೂ ಸುತ್ತಲಿನ ಕಾಂಪೌಂಡ್ ಪಾರಂಪರಿಕ ಕುರುಹುಗಳು. ಆದರೀಗ ಬೆಂಗಳೂರು-ನೀಲಗಿರಿ ರಸ್ತೆ ಭಾಗ ದಲ್ಲಿರುವ ಪಾರಂಪರಿಕ ಕಮಾನು (ಆರ್ಚ್) ಅನಾಥವಾಗಿ ನಿಂತಂತಿದೆ. ರಸ್ತೆ ಅಗಲೀ ಕರಣಕ್ಕಾಗಿ ಆರ್ಚ್‍ಗೆ ಹೊಂದಿಕೊಂಡಿದ್ದ ಕಾಂಪೌಂಡ್ ತೆರವು ಮಾಡಿ, ಸುಮಾರು 40 ಅಡಿ ಹಿಂದಕ್ಕೆ ಹೊಸದಾಗಿ ನಿರ್ಮಾಣ ಮಾಡಲಾಗಿದೆ. ಅಲ್ಲದೆ ರಿಪೇರಿ ನೆಪದಲ್ಲಿ ಆರ್ಚ್ ಅನ್ನು ಹಾಳು ಮಾಡಲಾಗುತ್ತಿದೆ.

ಫಾರ್ಚುನ್ ಜೆಪಿ ಪ್ಯಾಲೇಸ್ ಹೋಟೆಲ್ ಸಮೀಪದಿಂದ ಫೈವ್‍ಲೈಟ್ ವೃತ್ತದವರೆಗೆ ಸುಮಾರು 450 ಮೀ. ರಸ್ತೆ ಅಗಲೀಕರಣ ಕಾಮಗಾರಿಯನ್ನು 3.50 ಕೋಟಿ ರೂ. ಅಂದಾಜು ಮೊತ್ತದಲ್ಲಿ ನಗರಪಾಲಿಕೆ ಮೂಲಕ ನಡೆಸಲಾಗುತ್ತಿದೆ. ಈಗಾಗಲೇ ಸರ್ಕಾರಿ ಅತಿಥಿಗೃಹದ ಕಾಂಪೌಂಡ್ ಕೆಡವಿ , 40 ಅಡಿ ಹಿಂದಕ್ಕೆ ಹೊಸದಾಗಿ ನಿರ್ಮಿಸಲಾ ಗಿದೆ. ಸಾರ್ವಜನಿಕರಿಂದ ಪ್ರತಿರೋಧ ವ್ಯಕ್ತ ವಾಗಬಹುದು ಎಂಬ ಕಾರಣಕ್ಕೆ ಆರ್ಚ್ ಉಳಿಸಿಕೊಳ್ಳಲಾಗಿದೆ. ಆದರೆ ಅಕ್ಕಪಕ್ಕದಲ್ಲಿ ಕಾಂಪೌಂಡ್ ಇಲ್ಲದ ಕಾರಣ ಆರ್ಚ್ ಅನಾಥವಾಗಿ ನಿಂತಂತಿದೆ. ಆರ್ಚ್ ನವೀ ಕರಣ ಕೆಲಸವೂ ಒಟ್ಟು ಕಾಮಗಾರಿಯಲ್ಲಿ ಸೇರಿದೆ. ಆದರೆ ನವೀಕರಣ ಮಾಡುತ್ತಿ ರುವ ಪರಿ ಮಾತ್ರ ವಿಷಾದನೀಯ. ಒಂದಷ್ಟು ಮರಳು, ಹೆಚ್ಚು ಪ್ರಮಾಣದ ಎಂ ಸ್ಯಾಂಡ್, ಒಂದಷ್ಟು ಸಿಮೆಂಟ್ ಮಿಶ್ರಣ ಮಾಡಿ, ಯಾವುದೋ ಗೋಡೆಗೆ ಬಡಿದಂತೆ ಆರ್ಚ್‍ಗೆ ಪ್ಲಾಸ್ಟರಿಂಗ್ ಮಾಡಲಾಗುತ್ತಿದೆ. ಇಲ್ಲಿರುವ ನವಿಲು, ಗಂಡಬೇರುಂಡ, ಕಳಶ, ಹೂ-ಬಳ್ಳಿ ಇನ್ನಿತರ ಕೆತ್ತನೆಗಳನ್ನೂ ಮುಚ್ಚಿ ಹಾಕಬಹುದು. ಪಾರಂಪರಿಕ ಕಟ್ಟಡದ ಪರಿವೇ ಇಲ್ಲದೆ ನವೀಕರಣ ಕಾಮಗಾರಿ ಹೆಸರಲ್ಲಿ ಅದನ್ನು ಹಾಳು ಮಾಡಲಾಗುತ್ತಿದೆ. ಪಾರಂಪರಿಕ ಕಟ್ಟಡಗಳ ನವೀಕರಣ ಮಾಡುವಾಗ ಪುರಾ ತತ್ವ ಇಲಾಖೆಯ ಮಾರ್ಗದರ್ಶನ ಪಡೆಯ ಬೇಕು. ಸ್ಥಳಾಂತರ ಅಥವಾ ಅನಿವಾರ್ಯ ವಾಗಿ ನೆಲಸಮ ಮಾಡಬೇಕಾದಲ್ಲಿ ಅನು ಮತಿ ಪಡೆಯಲೇಬೇಕು.

ಇದ್ಯಾವುದನ್ನೂ ಇಲ್ಲಿ ಪರಿಗಣಿಸಿದಂತಿಲ್ಲ. ನದಿ ಮರಳು, ಸುಣ್ಣ, ನೀರು, ಕೋಳಿಮೊಟ್ಟೆ, ಬೆಲ್ಲದ ಪಾಕ ವನ್ನು ಸಮ ಪ್ರಮಾಣದಲ್ಲಿ ಹಾಕಿ, ಸುಟ್ಟ ಇಟ್ಟಿಗೆ ಚೂರು, ಅಂಟುವಾಳದ ಕಾಯಿ ಯನ್ನು ಸೇರಿಸಿ ಅರೆದು, ಅದನ್ನು 10 ದಿನಗಳ ನಂತರ ಗಾರೆಯಾಗಿ ಬಳಸಬೇಕೆಂದು ಪುರಾತತ್ವ ತಜ್ಞರು ಹೇಳುತ್ತಾರೆ. ಆದರೆ ಸರ್ಕಾರಿ ಅತಿಥಿಗೃಹದ ಆರ್ಚ್‍ಗೆ ಸಿಮೆಂಟ್ ಪ್ಲಾಸ್ಟರಿಂಗ್ ಮಾಡಲಾಗುತ್ತಿದೆ. ಪಾರಂಪರಿಕ ದೇವರಾಜ ಮಾರುಕಟ್ಟೆ, ಲ್ಯಾನ್ಸ್‍ಡೌನ್ ಕಟ್ಟಡಗಳನ್ನು ಉಳಿಸಿಕೊಳ್ಳಲು ನಿರ್ಧರಿಸಲಾಗಿದೆ.

ಅಶ್ವಾರೋಹಿ ದಳದ ಕಚೇರಿ ಮುಂಭಾಗದಲ್ಲಿದ್ದ ಮೈಸೂರು ಸಂಸ್ಥಾನದ ಅಶ್ವಾರೋಹಿದಳದ ಅಧಿಕಾರಿ ಭುಜಂಗ ರಾವ್ ಹಾಗೂ ಅಂಚೆ ವಿತರಕ ಬಸಪ್ಪ ಅವರ ಪಾರಂಪರಿಕ ಪ್ರತಿಮೆಗಳನ್ನು ತುಂಬಾ ಜೋಪಾನವಾಗಿ ಸ್ಥಳಾಂತರಿಸಲಾಯಿತು. ಆದರೆ ಪ್ರಮುಖ ರಸ್ತೆಯಲ್ಲಿರುವ, ಅರ್ಥಾತ್ ಪ್ರವಾಸಿಗರಿಗೆ ಒಂದು ರೀತಿ ಹೆಬ್ಬಾಗಿಲಂತಿರುವ ಸರ್ಕಾರಿ ಅತಿಥಿಗೃಹದ ಆರ್ಚ್ ಅನ್ನು ಹೀಗೆ ಹಾಳು ಮಾಡಿರುವುದು ಎಷ್ಟು ಸರಿ? ಎಂದು ಪಾರಂಪರಿಕ ಕಟ್ಟಡ, ಸ್ಮಾರಕಗಳ ಪ್ರೇಮಿಗಳು ಅತೀವ ಬೇಸರ ವ್ಯಕ್ತಪಡಿಸಿದ್ದಾರೆ.