ಮೈಸೂರಿನ ವಿವಿಧೆಡೆ ಚಾಮುಂಡೇಶ್ವರಿ ತಾಯಿ ವರ್ಧಂತಿ ಆಚರಣೆ

ಮೈಸೂರು,ಜು.24(ಎಂಟಿವೈ)- ಸಾಂಸ್ಕøತಿಕ ನಗರಿ ಮೈಸೂರಿನ ವಿವಿಧೆಡೆ ಬುಧವಾರ ಚಾಮುಂಡೇಶ್ವರಿ ತಾಯಿ ವರ್ಧಂತಿ ಮಹೋತ್ಸವ ವಿಜೃಂಭಣೆ ಯಿಂದ ನೆರವೇರಿಸಿ, ಸಾರ್ವಜನಿಕರಿಗೆ ಪ್ರಸಾದ ವಿನಿಯೋಗಿಸಲಾಯಿತು.
ಚಾಮುಂಡಿಬೆಟ್ಟದಲ್ಲಿ ವರ್ಧಂತಿ ಮಹೋತ್ಸವ ವೈಭವದಿಂದ ಜರುಗಿದರೆ, ಮೈಸೂರಿನ ವಿವಿಧ ದೇವಾಲಯಗಳು, ಆಟೋ ನಿಲ್ದಾಣ, ವಿವಿಧ ಬಡಾವಣೆಗಳ ಯುವಕರ ಸಂಘ, ಭಕ್ತರ ತಂಡಗಳು ಚಾಮುಂಡೇಶ್ವರಿ ದೇವಿಯ ಭಾವಚಿತ್ರವನ್ನು ಅಲಂಕರಿಸಿ ಪೂಜಿಸುವ ಮೂಲಕ ಭಕ್ತಿ ಪ್ರದರ್ಶಿಸಿದರು.

ಮೈಸೂರಿನ ಕೆಜಿ ಕೊಪ್ಪಲಿನಲ್ಲಿರುವ ಚಾಮುಂಡೇಶ್ವರಿ ದೇವಾಲಯದಲ್ಲಿ ವರ್ಧಂತಿ ಮಹೋತ್ಸವವು ವಿಜೃಂಭಣೆ ಯಿಂದ ನಡೆಯಿತು. ದೇವಸ್ಥಾನವನ್ನು ವಿವಿಧ ಹೂವುಗಳಿಂದ ಅಲಂಕರಿಸ ಲಾಗಿತ್ತು. ದೇವಿಗೆ ವಿವಿಧ ಅಭಿಷೇಕ ನೆರವೇರಿಸಿ ಮಹಾಮಂಗಳಾರತಿ ಬೆಳಗಿದ ನಂತರ ಭಕ್ತರÀ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು.

ವಿಜಯನಗರದ ಯೋಗನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಬೋಗಾದಿಯ ಲಿಂಗರಾಜ ಕಟ್ಟೆ ಬಳಿ ಇರುವ ಚಾಮುಂಡೇಶ್ವರಿ ಅಮ್ಮನವರ ಸನ್ನಿಧಾನ ದಲ್ಲಿ ವಿಶೇಷ ಅಭಿಷೇಕ ಹಾಗೂ ದೇವಿಗೆ ಬೆಳ್ಳಿ ಕವಚ ಧಾರಣೆ ಮಾಡಿ ಪೂಜೆ ಸಲ್ಲಿಸಲಾಯಿತು. ಹಳೇಬಂಡಿಕೇರಿ ಮಹಾ ಲಕ್ಷ್ಮೀ ಕೊಲ್ಲಾಪುರದಮ್ಮ ದೇವಾಲಯ ದಲ್ಲಿ ಉಯ್ಯಾಲೋತ್ಸವ ನಡೆಯಿತು. ಮೇಟ ಗಳ್ಳಿಯ ಕರಕುಶಲನಗರದ ಚಾಮುಂಡೇಶ್ವರಿ ಭಕ್ತ ಮಂಡಳಿಯಿಂದ ಚಾಮುಂಡೇಶ್ವರಿ ಅಮ್ಮನವರ 30ನೇ ವರ್ಷದ ಪೂಜಾ ಮಹೋತ್ಸವ ನೆರವೇರಿತು.

ಅನ್ನ ಸಂತರ್ಪಣೆ: ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಹಿನ್ನೆಲೆಯಲ್ಲಿ ಹಲವೆಡೆ ಅನ್ನಸಂತರ್ಪಣೆ, ಪ್ರಸಾದ ವಿನಿ ಯೋಗ ನಡೆಯಿತು. ಟಾಟಾ ಎಸಿ, ಗೂಡ್ಸ್ ಆಟೋಗಳಲ್ಲಿ ತಂದಿದ್ದ ಬೇಳೆ ಬಾತ್, ಚಿತ್ರಾನ್ನ, ಮೊಸರನ್ನ, ರೈಸ್ ಬಾತ್ ವಿತರಿಸಲಾಯಿತು. ಅನುಮತಿ ಪಡೆದ ವಾಹನಗಳಲ್ಲಿ ಪ್ರಸಾದ ತರುತ್ತಿದ್ದ ಭಕ್ತಾದಿಗಳು ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದ ಬಳಿಕ ಪ್ರಸಾದ ಹಂಚಿಕೆ ಮಾಡಿದರು.

ಅಗ್ರಹಾರ ವೃತ್ತ, 101 ಗಣಪತಿ ದೇವಸ್ಥಾನ ವೃತ್ತ, ನಂಜುಮಳಿಗೆ ವೃತ್ತ, ಚಾಮರಾಜ ಜೋಡಿ ರಸ್ತೆ, ರಾಮಸ್ವಾಮಿ ವೃತ್ತ, ದಿವಾನ್ಸ್ ರಸ್ತೆ, ಗಾಂಧಿವೃತ್ತ, ಜೆಪಿ ನಗರ, ಗೊಬ್ಬಳಿಮರ ವೃತ್ತ, ವಿದ್ಯಾರಣ್ಯಪುರಂ, ಚಾಮುಂಡಿಪುರಂ, ಕುವೆಂಪುನಗರ, ಶಾರದಾದೇವಿನಗರ, ಕುಂಬಾರಕೊಪ್ಪಲು, ಒಂಟಿಕೊಪ್ಪಲು, ದಟ್ಟಗಳ್ಳಿ, ಹಳೆಯ ಆರ್‍ಎಂಸಿ, ಜೆಎಸ್‍ಎಸ್ ಆಸ್ಪತ್ರೆ ರಸ್ತೆ ಮೊದಲಾದ ಪ್ರದೇಶಗಳಲ್ಲಿಯೂ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನಡೆಯಿತು. ಚಾಮುಂಡೇಶ್ವರಿ ಭಾವಚಿತ್ರ ಇಟ್ಟು ಪೂಜೆ ಸಲ್ಲಿಸಿ, ಪ್ರಸಾದ ವಿತರಿಸಲಾಯಿತು.