ಬೇಲೂರು: ಹಳೇಬೀಡಿನ ಬಸ್ತಿಹಳ್ಳಿಯಲ್ಲಿರುವ ಜಿನ ಬಸದಿಯಲ್ಲಿನ ಶಾಂತಿನಾಥಸ್ವಾಮಿಗೆ ಮಸ್ತಕಾಭಿಷೇಕ ವಿಜೃಂಭಣೆಯಿಂದ ಜರುಗಿತು.
ಹೊಯ್ಸಳರ ಕಾಲದ ಬಸ್ತಿಹಳ್ಳಿ ಗ್ರಾಮ ದಲ್ಲಿನ 1008 ಶಾಂತಿನಾಥ ತೀರ್ಥಂಕರರಿಗೆ ನಡೆದ ಅರ್ಥಪೂರ್ಣ ಬಣ್ಣದೋಕುಳಿಯ ಮಹಾ ಮಸ್ತಕಾಭಿಷೇಕವನ್ನು ವೀಕ್ಷಿಸಿದ ಸಾವಿರಾರು ಭಕ್ತರು ಪುನೀತರಾದರು. 18 ಅಡಿ ಎತ್ತರದ ಶಾಂತಿನಾಥ ಮೂರ್ತಿಗೆ ವಿವಿಧ ದ್ರವ್ಯಗಳಿಂದ ಅಭಿಷೇಕ ನಡೆಸ ಲಾಯಿತು. ಪ್ರತಿಷ್ಠಾಚಾರ್ಯರ ಸಮ್ಮುಖದಲ್ಲಿ ಪುರೋಹಿತರ ಮಂತ್ರಘೋಷದಿಂದ ಅಭಿಷೇಕ ನಡೆದಾಗ ನೆರೆದಿದ್ದ ಭಕ್ತರು ಜಯಘೋಷ ಮೊಳಗಿಸಿದರು.
ಪ್ರಾಚೀನ ಕಾಲದ ವಿಶಾಲವಾದ ಜಿನ ಮಂದಿರದಲ್ಲಿ ನೂರಾರು ಜನ ಕುಳಿತು ಅಭಿಷೇಕ ವೀಕ್ಷಿಸಿದರೆ, ಹೊರಗಡೆ ಅಳವಡಿಸಲಾಗಿದ್ದ ದೊಡ್ಡ ಪರದೆಯ ಮೂಲಕ ಸಾವಿರಾರು ಭಕ್ತರು ಅಭಿಷೇಕ ಕಣ್ತುಂಬಿಕೊಂಡರು. ನಂತರ ಸರದಿಯಲ್ಲಿ ತೀರ್ಥಂಕರರ ದರ್ಶನ ಪಡೆದು ಜಿನಗಂಧೋದಕ ಪಡೆದು ಪಾವನರಾದರು. ಅಭಿಷೇಕಕ್ಕೂ ಮೊದಲು ಮಂಗಳ ವಾದ್ಯ ದೊಂದಿಗೆ ಶಾಂತಿನಾಥ ತೀರ್ಥಂಕರರ ಪಲ್ಲಕ್ಕಿ ಉತ್ಸವ ಬಸ್ತಿಹಳ್ಳಿ ವೃತ್ತದವರಗೆ ಜರುಗಿತು. ಜೈನ ಶ್ರಾವಕರು ಜಿನ ಭಜನೆ ಮಾಡಿದರು.
ಹಾಸನದ ದಿಗಂಬರ ಜೈನ ಯುವಕ ಸಂಘ, ದೊಡ್ಡಬಸದಿ ಜೈನ ಸಮಾಜ ಹಾಗೂ ಜೈನಬಾಂಧವರು ಅಭಿಷೇಕದ ವ್ಯವಸ್ಥೆ ಮಾಡಿದ್ದರು. ಜೈನಧರ್ಮ ಪ್ರಭಾವಕ ಮುನಿಶ್ರೀ ವೀರಸಾಗರ ಮಹಾರಾಜ್, ಆರ್ಜೀವ್ ಸಾಗರ್ ಮಹಾರಾಜ್, ಸೌಮ್ಯ ಸಾಗರ್ ಮಹಾರಾಜ್ ಸಾನಿಧ್ಯದಲ್ಲಿ ನಡೆದ ಪೂಜಾ ಕಾರ್ಯಗಳನ್ನು ಪುರೋಹಿತರಾದ ಪವನ ಪಂಡಿತ್, ಜಿನರಾಜೇಂದ್ರ, ಪದ್ಮಪ್ರಭು, ಸುಖಿಕುಮಾರ್, ಜಯಕುಮಾರ್ ಬಾಬು ನೆರವೇರಿಸಿದರು.
ಹಾಸನದ ಜೈನ ಸಮಾಜ ಅಧ್ಯಕ್ಷ ಎಂ.ಅಜಿತ್‍ಕುಮಾರ್, ವಿದ್ವಾಂಸ ಬೇಗೂರು ವೀರೇಂದ್ರ, ದಿಗಂಬರ ಜೈನಸಮಾಜ ಮುಖಂಡರಾದ ಎಚ್.ಪಿ.ನಾಗರಾಜ್, ದೇವನಾಗ್, ಅಮೃತ್‍ಜೈನ್, ಧನುಷ್, ಸಮಂತ್, ಅನಿಲ್‍ಕುಮಾರ್ ಇದ್ದರು.