ಅಘಲಯದಲ್ಲಿ ಸಂಭ್ರಮದ ಹನುಮ ಜಯಂತಿ

ಅಘಲಯ, ಡಿ.10- ಗ್ರಾಮದ ಶ್ರೀಪ್ರಸನ್ನ ಆಂಜನೇಯಸ್ವಾಮಿ ದೇವಾಲಯದಲ್ಲಿ 81ನೇ ವರ್ಷದ ಹನುಮ ಜಯಂತಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಹನುಮ ಜಯಂತಿ ಅಂಗವಾಗಿ ಸ್ವಾಮಿಗೆ ಅಭಿಷೇಕ, ವಿವಿಧ ಪುಷ್ಪಾಲಂಕಾರ, ಹೋಮ-ಹವನ, ಪೂರ್ಣಹುತಿ, ಪಲ್ಲಕ್ಕಿ ಉತ್ಸವ, ಸಿಡಿಮದ್ದು ಪ್ರದರ್ಶನ, ಅನ್ನದಾನ ಮತ್ತಿತರರ ಕಾರ್ಯಕ್ರಮ ನಡೆದವು. ಬಳಿಕ ಸರ್ವಾಲಂಕಾರಗೊಂಡ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ಉತ್ಸವ ಮೂರ್ತಿಯನ್ನು ವೀರಗಾಸೆ ಕುಣಿತ, ಪೂಜಾ ಕುಣಿತ, ಡೊಳ್ಳು ಕುಣಿತ, ಮಂಗಳವಾದ್ಯ ಮತ್ತಿತರ ಜಾನಪದ ಕಲಾ ತಂಡಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಈ ವೇಳೆ ಬೆಂಗಳೂರು, ಮೈಸೂರು, ಮೇಲು ಕೋಟೆ ಸೇರಿದಂತೆ ವಿವಿಧೆಡೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ದೇವರ ದರ್ಶನ ಪಡೆದು ಪುನೀತರಾದರು.

ಗ್ರಾಮದ ಛತ್ರಿ ಶ್ರೀನಿವಾಸ ಅಯ್ಯಂಗಾರ್ ಕುಟುಂಬದ ಬೆಂಗಳೂರಿನ ವಕೀಲ ವಿಜಯ ರಾಘವನ್ ಮತ್ತು ಅವರ ಪತ್ನಿ ಅನುರಾಧಾ ಅವರ ನೆರವಿನೊಂದಿಗೆ ಗ್ರಾಮಸ್ಥರು ಹನುಮ ಜಯಂತಿ ಆಚರಿಸಿದರು.

ಕಾರ್ಯಕ್ರಮದಲ್ಲಿ ಜಗನ್ನಾಥ್, ನಂಜುಂಡನ್, ಶೆಲ್ವಿ ಅಯ್ಯಂಗಾರ್, ತಾಪಂ ಸದಸ್ಯ ಜಾನಕೀರಾಂ, ಟಿಎಪಿಸಿಎಂಎಸ್ ಅಧ್ಯಕ್ಷ ಎ.ಎಸ್.ಶ್ರೀಧರ್, ಅಘಲಯ ಗ್ರಾಪಂ ಅಧ್ಯಕ್ಷ ಧನಂಜಯ, ಮಾಜಿ ಅಧ್ಯಕ್ಷೆ ಭಾರತಿ, ಶಿಲ್ಪ, ಪಿಎಲ್‍ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎ.ಎಸ್.ರಮೇಶ್, ನಿವೃತ್ತ ಶಿಕ್ಷಕ ನಂಜಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಲೋಕೇಶ್ ಇತರರಿದ್ದರು.