‘ಹಣದಿಂದ ಆರೋಗ್ಯ ಕೊಳ್ಳಲಾಗುವುದಿಲ್ಲ’ಶ್ರೀ ಸಿದ್ದೇಶ್ವರ ಸ್ವಾಮೀಜಿ ಅಭಿಮತ

ಸುತ್ತೂರು: ಹಣದಿಂದ ಆರೋಗ್ಯವನ್ನಾಗಲೀ, ಯೌವನವನ್ನಾಗಲೀ ಕೊಂಡುಕೊಳ್ಳಲು ಸಾಧ್ಯವಿಲ್ಲ. ಆದರೆ, ಸ್ವಸ್ಥ ಚಿಂತನೆಯಿಂದ ಹಾಗೂ ಶಿಸ್ತು ಬದ್ದ ಬದುಕಿನಿಂದ ಇಳಿ ವಯಸ್ಸಿನಲ್ಲಿಯೂ ಆರೋಗ್ಯವಂತರಾಗಿ ಇರಬಹುದು ಎಂದು ವಿಜಾಪುರದ ಜ್ಞಾನಯೋಗೇಶ್ವರ ಮಠದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.
ಸುತ್ತೂರು ಶ್ರೀ ಕ್ಷೇತ್ರದಲ್ಲಿರುವ ಜೆಎಸ್‍ಎಸ್ ಹಿರಿಯ ಮನೆ ನಿವಾಸಿಯಾಗಿರುವ ಕೆ.ಎಂ.ತಮ್ಮಯ್ಯನವರ ನೂರನೇ ಹುಟ್ಟುಹಬ್ಬ ಕಾರ್ಯಕ್ರಮದ ಸಾನಿದ್ಯ ವಹಿಸಿ ಅವರು ಮಾತನಾಡಿದರು.

ಮನುಷ್ಯ ತನ್ನ ದುರಾಲೋಚನೆಗಳಿಂದ ಆರೋಗ್ಯ ಮತ್ತು ಆಯುಷ್ಯವನ್ನು ಕಳೆದಕೊಳ್ಳುತ್ತಿದ್ದಾನೆ ಎಂದು ವಿಷಾಧಿಸಿದ ಅವರು, ಮನುಷ್ಯ ಭವಿಷ್ಯದ ಚಿಂತೆಯಲ್ಲಿ ವರ್ತಮಾನದ ಸುಖದಿಂದ ವಂಚಿತನಾಗಿದ್ದಾನೆ. ಸುತ್ತೂರು ಹಿರಿಯರ ಮನೆಯಲ್ಲಿ ಹಿರಿಯ ನಾಗರೀಕರಿಗೆ ಪೂರಕವಾದ ಎಲ್ಲಾ ರೀತಿಯ ಸೌಲಭ್ಯಗಳನ್ನು ಸುತ್ತೂರು ಶ್ರೀಗಳು ಒದಗಿಸಿಕೊಟ್ಟು, ನಿವಾಸಿಗಳು ತಮ್ಮ ಬದುಕಿನ ಸಂದ್ಯಾ ಕಲಾವನ್ನು ನೆಮ್ಮದಿಯಿಂದ ಕಳೆಯುವಂತೆ ಮಾಡಿದ್ದಾರೆ ಎಂದರು.

ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರು ಆಶೀರ್ವಚನ ನೀಡುತ್ತಾ, ಮನುಷ್ಯರು ಸಹಜವಾಗಿ ಯೌವನದಲ್ಲಿ ತಮ್ಮ ಹೆತ್ತವರನ್ನು ಕಡೆಗಣಿಸುತ್ತಾರೆ, ವಯೋವೃದ್ಧರಾದಾಗ ತಮ್ಮ ಮಕ್ಕಳು ಸೇವೆಯನ್ನು ಮಾಡಲಿ ಎಂದು ಬಯಸುತ್ತಾರೆ. ಆದರೆ ಅವರ ಮಕ್ಕಳು ಹೆತ್ತವರನ್ನು ಅನುಸರಿಸಿ, ಅವರನ್ನೂ ಇಳಿಯವಸ್ಸಿನಲ್ಲಿ ತಾತ್ಸಾರದಿಂದ ನೋಡುತ್ತಾರೆ. ಹಿರಿಯರ ಕೋರಿಕೆಗಳು ಕಡಿಮೆ ಇದ್ದರೆ ಸಂತೋಷ ಹೆಚ್ಚಾಗಿರುತ್ತದೆ, ಹಾಗೆಯೆ ಇರುವಲ್ಲಿಯೇ ಸಂತೋಷವನ್ನು ಕಾಣುವುದು ಜಾಣತನ ಎಂದು ನುಡಿದರು.

ಪೂಜ್ಯರುಗಳಿಂದ ಆಶೀರ್ವಾದ ಪಡೆದ ಶತಾಯುಷಿ ಶ್ರೀ ಕೆ.ಎಂ.ತಮ್ಮಯ್ಯನವರು ಹಿರಿಯ ರಾಜಕಾರಣಿಗಳಾದ ನಿಜಲಿಂಗಪ್ಪ, ವೀರೇಂದ್ರ ಪಾಟೀಲ್ ಹಾಗೂ ರಾಮಕೃಷ್ಣ ಹೆಗಡೆಯವರುಗಳೊಂದಗಿನ ಒಡನಾಟ ಹೊಂದಿದ್ದರಿಂದ ಅನೇಕ ಜನಪರ ಕಾರ್ಯಗಳನ್ನು ಮಾಡಲು ಸಾಧ್ಯವಾಯಿತು ಎಂದರು. ಸ್ವಾರ್ಥ ರಾಜಕಾರಣ ಮಾಡದೆ, ಸಾರ್ವಜನಿಕರ ಸೌಕರ್ಯಕ್ಕಾಗಿ ತಾವು ಶ್ರಮಿಸಿದ್ದನ್ನು ಸ್ಮರಿಸಿಕೊಂಡರು.

ಶ್ರೀ ಕೆ.ಎಂ.ತಮ್ಮಯ್ಯನವರ ಕುರಿತಾಗಿ ಅವರ ಸಹ ನಿವಾಸಿಗಳಾದ ಮಾದೇಗೌಡ, ಕೃಷ್ಣಮೂರ್ತಿ ಹಾಗೂ ಕೆ.ವೆಂಕಟೇಶ್ವರ ರಾವ್ ಅನಿಸಿಕೆಗಳನ್ನು ಹಂಚಿಕೊಂಡರು. ಶ್ರೀ ಕೆ.ಎಂ.ತಮ್ಮಯ್ಯನವರ ಕುಟುಂಬದ ನಿಕಟವರ್ತಿಗಳಾದ, ಸಿಂಡಿಕೇಟ್‍ನ ಮಾಜಿ ಸದಸ್ಯ ಡಾ.ಕೆ.ಮಹದೇವರವರು ಸಹ ಅವರ ನಿಸ್ವಾರ್ಥ ಸೇವೆಗಳನ್ನು ಕೊಂಡಾಡಿದರು.
ಕಾರ್ಯಕ್ರಮದಲ್ಲಿ ಸುತ್ತೂರಿನ ಜೆಎಸ್‍ಎಸ್ ಹಿರಿಯರ ಮನೆಗಳ ನಿವಾಸಿಗಳಲ್ಲದೆ ಮೈಸೂರಿನ ಅರವಿಂದ ನಗರದಲ್ಲಿರುವ ಜೆಎಸ್‍ಎಸ್ ವೃದ್ಧಾಶ್ರಮದ ನಿವಾಸಿಗಳು ಪಾಲ್ಗೊಂಡಿದ್ದರು. ಶ್ರೀ ಕೆ.ಎಂ.ತಮ್ಮಯ್ಯನವರ ಪುತ್ರರಾದ ಶ್ರೀ ದಯಾನಂದ ಪಾಟೀಲ್ ಹಾಗೂ ಬಂಧು-ಬಳಗದವರು ಹಾಜರಿದ್ದರು.