ಮೈಸೂರಲ್ಲಿ ಧಾರಾಕಾರ ಮಳೆ

ಮೈಸೂರು: ಭಾನುವಾರ ರಾತ್ರಿ ದಿಢೀರ್ ಸುರಿದ ಗುಡುಗು, ಗಾಳಿ ಸಹಿತ ಭಾರೀ ಮಳೆಗೆ ಸಾಂಸ್ಕೃತಿಕ ನಗರಿ ಮೈಸೂರಿನ ಜನಜೀವನ ಅಸ್ತವ್ಯಸ್ತ ಗೊಂಡು, ವಾಹನ ಸವಾರರ ಓಡಾಟಕ್ಕೆ ತೀವ್ರ ತೊಂದರೆಯಾಯಿತು. ವರ್ಷಾರಂಭದಲ್ಲಿ ಸುರಿದ ಮೊದಲ ಅಕಾಲಿಕ ಮಳೆಯಾಗಿರುವುದು ವಿಶೇಷ.

ಅಕಾಲಿಕವಾಗಿ ಸುರಿದ ಮಳೆಯಿಂದಾಗಿ ಮೈಸೂರು ನಗರ ಮತ್ತು ಜಿಲ್ಲೆಯಾದ್ಯಂತ ಮಳೆಯಾಗಿದೆ. ಆದರೆ, ಮೈಸೂರು ನಗರದ ಅರಮನೆ ಸುತ್ತಮುತ್ತ, ಕೆ.ಆರ್. ವೃತ್ತ, ಅಗ್ರಹಾರ, ವಿದ್ಯಾರಣ್ಯಪುರಂ, ರಾಮಕೃಷ್ಣ ನಗರ, ಶಾರದಾದೇವಿ ನಗರ, ಬೋಗಾದಿ 2ನೇ ಹಂತ, ರಾಜೀವ್ ನಗರ, ರಮಾಬಾಯಿ ನಗರ, ಎನ್.ಆರ್. ಮೊಹಲ್ಲಾ, ಮಧುವನ ಬಡಾವಣೆ, ರಾಘವೇಂದ್ರ ನಗರ, ಚಾಮುಂಡಿ ಪುರಂ, ಚಾಮರಾಜಪುರಂ, ಮಹದೇಶ್ವರ ಬಡಾವಣೆ, ಹೆಬ್ಬಾಳ, ಬೃಂದಾವನ ಬಡಾವಣೆ ಸೇರಿದಂತೆ ಇತರೆ ಬಡಾವಣೆಗಳಲ್ಲಿ ಧಾರಾಕಾರ ಮಳೆ ಸುರಿದು ರಸ್ತೆಗಳು ಕೆÀರೆಯಂತಾಗಿ, ಯುಜಿಡಿ ಪೈಪ್‍ಲೈನ್‍ಗಳಲ್ಲಿ ಮಳೆ ಮಿಶ್ರಿತ ನೀರು ರಸ್ತೆಯ ಮೇಲೆ ಹರಿದು ವಾಹನ ಮತ್ತು ಪಾದಚಾರಿಗಳ ಓಡಾಟಕ್ಕೆ ತೀವ್ರ ತೊಂದರೆಯಾಗಿದೆ.

ಸರಸ್ವತಿಪುರಂನಲ್ಲಿ 20 ನಿಮಿಷಗಳ ಕಾಲ ಗುಡುಗು ಸಹಿತ ಮಳೆಯಾಗಿದೆ ಎಂದು ಇಲ್ಲಿನ ನಿವಾಸಿ ಚಂದ್ರ ಶೇಖರ್ `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ. ಜಯ ಲಕ್ಷ್ಮೀಪುರಂನಲ್ಲಿ 30 ನಿಮಿಷ, ಯಾದವಗಿರಿಯಲ್ಲಿ 40 ನಿಮಿಷ, ಬಸವೇಶ್ವರ ರಸ್ತೆ, ರಾಮಕೃಷ್ಣನಗರ ಹೆಚ್ ಬ್ಲಾಕ್‍ನಲ್ಲಿ 20 ನಿಮಿಷ, ಜಯನಗರ 35 ನಿಮಿಷ, ಜೆ.ಪಿ.ನಗರ 40 ನಿಮಿಷ ಮಳೆಯಾಗಿದೆ ಎಂದು ಆಯಾಯ ಬಡಾವಣೆಯ ಸಾರ್ವಜನಿಕರು ಮಾಹಿತಿ ನೀಡಿದ್ದಾರೆ. ಎಸ್‍ಬಿಎಂ ಕಾಲೋನಿ, ಶ್ರೀರಾಮಪುರ 2ನೇ ಹಂತದ ಸೇರಿದಂತೆ ಸುತ್ತಮುತ್ತ ಬಡಾವಣೆಗಳಲ್ಲಿ ಜೋರು ಮಳೆಯಾಗಿದೆ. ಕೆಲವೆಡೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ ಎಂದು ಇಲ್ಲಿನ ನಿವಾಸಿ ಕೆ.ವಿ.ರಾಮನಾಥ್ `ಮೈಸೂರು ಮಿತ್ರ’ನಿಗೆ ತಿಳಿಸಿದ್ದರೆ. ಭಾನುವಾರ ರಾತ್ರಿ ಸುರಿದ ಮಳೆಗೆ ಅಗ್ರಹಾರದ ಉತ್ತರಾಧಿ ಮಠದ 2ನೇ ಅಡ್ಡರಸ್ತೆಯಲ್ಲಿ ಮರವೊಂದು ನೆಲಕ್ಕುರುಳಿದ್ದು, ಇದರ ಕೆಳಗೆ ನಿಂತಿದ್ದ(ಕೆಎ.09 ಪಿ. 7554) ಕಾರು ಜಖಂಗೊಂಡಿದೆ. ಇದರ ಜೊತೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಿದೆ ಎಂದು ಇಲ್ಲಿನ ನಿವಾಸಿ ಅರುಣ್ ಪತ್ರಿಕೆಗೆ ತಿಳಿಸಿದ್ದಾರೆ.

ಕಾಳಿದಾಸ ರಸ್ತೆಯ ಐಸಿಐಸಿಐ ಬ್ಯಾಂಕ್ ಸಮೀಪದಲ್ಲಿ ತೆಂಗಿನ ಗರಿಯೊಂದು ವಿದ್ಯುತ್ ಲೈನ್ ಮೇಲೆ ಬಿದ್ದು, ಇಲ್ಲಿನ ಸುತ್ತ ಮುತ್ತಲಿನ ಮನೆಗಳಿಗೆ ವಿದ್ಯುತ್ ಸಂಪರ್ಕ ದಲ್ಲಿ ವ್ಯತ್ಯಯವಾಗಿದೆ. ವಿದ್ಯುತ್ ತಂತಿಮೇಲೆ ಬಿದ್ದ ತೆಂಗಿನಗರಿ ಸಂಪೂರ್ಣ ಸುಟ್ಟು ಭಸ್ಮವಾಗಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಸರಸ್ವತಿಪುರಂ ಅಗ್ನಿಶಾಮಕ ದಳದ ಇನ್ಸ್‍ಪೆಕ್ಟರ್ ರಾಜು `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ. ಮೈಸೂರಲ್ಲಿ ಧಾರಾ ಕಾರ ಮಳೆಯಾಗಿದ್ದರೂ ಯಾವುದೇ ಅಹಿತಕರ ಘಟನೆ ಸಂಭವಿಸಿರುವ ಬಗ್ಗೆ ಇಲ್ಲಿಯವರೆಗೂ ಯಾವುದೇ ದೂರು(0821-2440890)ಗಳು ಸಾರ್ವಜನಿಕರಿಂದ ಬಂದಿಲ್ಲ ಎಂದು ಮೈಸೂರು ನಗರ ಪಾಲಿಕೆ ಕಂಟ್ರೋಲ್ ರೂಂ ಸಿಬ್ಬಂದಿ ಪತ್ರಿಕೆಗೆ ತಿಳಿಸಿದರು.

ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಮೈಸೂರು ನಗರ ಪೊಲೀಸ್ ಕಂಟ್ರೋಲ್ ಸುತ್ತಮುತ್ತ ಹಾಗೂ ಮೈಸೂರು-ಬೆಂಗಳೂರು ರಸ್ತೆ, ಮೈಸೂರು-ಹುಣಸೂರು ರಸ್ತೆ, ವಾಲ್ಮೀಕಿ ರಸ್ತೆಯಲ್ಲಿ ಮಳೆ ನೀರು ತುಂಬಿ ವಾಹನ ಸವಾರರ ತಿರುಗಾಟಕ್ಕೆ ತೀವ್ರ ತೊಂದರೆಯಾಗಿತ್ತು. ಅಲ್ಲದೆ, ವಿಕ್ರಂ ಆಸ್ಪತ್ರೆಯಿಂದ ಹೈವೇ ವೃತ್ತ ಸಂಪರ್ಕಿಸುವ ರಸ್ತೆಯಲ್ಲಿ ಮಳೆ ನೀರು ರಸ್ತೆಯಲ್ಲಿ ಹರಿದು, ರಸ್ತೆಗೆ ಹಾಕಿದ್ದ ಜಲ್ಲಿಕಲ್ಲುಗಳನ್ನು ಒತ್ತು ರೈಲ್ವೆ ಅಂಡರ್ ಬ್ರಿಜ್ ಬಳಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ ಸಾರ್ವಜನಿಕರೊಬ್ಬರು `ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದರು. ಬೇಸಿಗೆಕಾಲ ಆರಂಭಕ್ಕೂ ಮುನ್ನ ದಿಢೀರ್ ಮಳೆಯಿಂದಾಗಿ ಸಾಂಕ್ರಮಿಕ ರೋಗಗಳ ಭೀತಿಯಿಲ್ಲ. ಆದರೆ, ರಸ್ತೆ ಹೊಂಡ, ಚರಂಡಿಗಳಲ್ಲಿ ಹಾಗೂ ಹಳ್ಳ-ಕೊಳ್ಳಗಳಲ್ಲಿ ನೀರು ನಿಂತರೆ ಸಾಂಕ್ರಮಿಕ ರೋಗಗಳು ಹರಡುವ ಭೀತಿ ಇರುತ್ತದೆ. ಈ ಮಳೆಯಿಂದ ಯಾವುದೇ ತೊಂದರೆ ಯಿಲ್ಲ. ಆದರೂ ನಗರ ಜನತೆ ಕಾಯಿಸಿದ ನೀರನ್ನು ಸೇವಿಸುವಂತೆ ಮೈಸೂರು ಆರೋಗ್ಯಾಧಿಕಾರಿ ಡಾ.ಬಸವರಾಜ್ `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.