ಮೈಸೂರು, ಜ.9(ಆರ್‍ಕೆ)- ಪ್ರಯಾಣಿಕರ ಸುರ ಕ್ಷತೆಗಾಗಿ ರೈಲ್ವೆ ಇಲಾಖೆಯು ಮೈಸೂರು ರೈಲು ನಿಲ್ದಾಣದಲ್ಲಿ ಭಾರೀ ಭದ್ರತಾ ವ್ಯವಸ್ಥೆ ಏರ್ಪಡಿಸಿದೆ.
ಪಾರಂಪರಿಕ ಶೈಲಿಯನ್ನು ಉಳಿಸಿಕೊಂಡು ‘ಐ ಲವ್ ಮೈಸೂರು’, ‘ಸೆಲ್ಫಿ ಸ್ಪಾಟ್’, ‘ಲೈಫ್ ಈಸ್ ಎ ಜರ್ನಿ’ ಪ್ರಯಾಣಿಕರ ಪ್ರತಿಮೆಗಳೊಂದಿಗೆ ಬಹಳಷ್ಟು ಬದಲಾವಣೆಯೊಂದಿಗೆ ಮೈಸೂರು ರೈಲು ನಿಲ್ದಾಣ ವನ್ನು ನವೀಕರಿಸಿರುವ ಇಲಾಖೆಯು, ಇದೀಗ ಪ್ರಯಾ ಣಿಕರ ಸುರಕ್ಷತೆಗಾಗಿ ಮತ್ತಷ್ಟು ಭದ್ರತಾ ಕ್ರಮಗಳನ್ನು ಕೈಗೊಂಡಿದೆ. ರಾಷ್ಟ್ರವ್ಯಾಪ್ತಿ ಭದ್ರತಾ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ‘ನಿರ್ಭಯ’ ಅನುದಾನ ದಲ್ಲಿ 34 ಸಿಸಿ ಕ್ಯಾಮರಾಗಳು ಹಾಗೂ ರೈಲು ನಿಲ್ದಾಣದ ಪ್ರವೇಶ ದ್ವಾರದಲ್ಲಿ ಬ್ಯಾಗೇಜ್ ಸ್ಕ್ಯಾನರ್‍ಗಳನ್ನು ಅಳ ವಡಿಸಿ, ಪ್ರಯಾಣಿಕರ ಲಗೇಜ್ ಬ್ಯಾಗು ಗಳನ್ನು ತಪಾಸಣೆ ಮಾಡುವ ವ್ಯವಸ್ಥೆ ಮಾಡಲಾಗಿದೆ. ವೇಯ್ಟಿಂಗ್ ಹಾಲ್, ರಿಸರ್ವೇಷನ್ ಟಿಕೆಟ್ ಕೌಂಟರ್ಸ್, ಪಾರ್ಕಿಂಗ್ ಸ್ಥಳ, ಮುಖ್ಯದ್ವಾರ, ಹೊರ ಹೋಗುವ ಸ್ಥಳ, ಫ್ಲಾಟ್‍ಫಾರಂಗಳು, ಫುಟ್ ಓವರ್ ಬ್ರಿಡ್ಜ್ (ಎಫ್‍ಓಬಿ), ಬುಕ್ಕಿಂಗ್ ಆಫೀಸ್ ಸೇರಿದಂತೆ ಮೈಸೂರು ರೈಲು ನಿಲ್ದಾಣದ ಎಲ್ಲೆಡೆ ಸಿಸಿ ಕ್ಯಾಮರಾಗಳನ್ನು ಅಳವಡಿಸಿ ಕಂಟ್ರೋಲ್ ರೂಂನಲ್ಲಿ ಪ್ರಯಾಣಿಕರ ಚಲನವಲನಗಳ ಮೇಲೆ ನಿಗಾ ವಹಿಸ ಲಾಗುತ್ತಿದೆ. ಮೊದಲ ಹಂತದಲ್ಲಿ ನೈರುತ್ಯ ರೈಲ್ವೆ ವಿಭಾಗವು ಬಳ್ಳಾರಿ ರೈಲು ನಿಲ್ದಾಣಕ್ಕೆ 33 ಸಿಸಿ ಕ್ಯಾಮರಾ, ಬೆಳಗಾವಿಯಲ್ಲಿ 36, ಬೆಂಗಳೂರು ಕಂಟೋನ್‍ಮೆಂಟ್‍ನಲ್ಲಿ 21, ಬೆಂಗ ಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ 36, ಹಾಸನದಲ್ಲಿ 36 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗುವುದು ಎಂದು ಇಲಾಖೆ ತಿಳಿಸಿದೆ.
ಭದ್ರತಾ ಸಿಬ್ಬಂದಿ ರೈಲು ನಿಲ್ದಾಣದ ಕಂಟ್ರೋಲ್ ರೂಂ ನಲ್ಲಿ ಸಿಸಿ ಕ್ಯಾಮರಾ ಫುಟೇಜಸ್‍ಗಳನ್ನು ಮಾನಿಟರ್ ಮಾಡುವರಲ್ಲದೆ, ಹುಬ್ಬಳ್ಳಿ, ಮೈಸೂರು ಮತ್ತು ಬೆಂಗ ಳೂರಿನಲ್ಲಿರುವ ವಿಭಾಗೀಯ ಹೆಡ್‍ಕ್ವಾರ್ಟರ್‍ಗಳ ಡಿವಿಷನಲ್ ಸೆಂಟ್ರಲ್ ಸೆಕ್ಯೂರಿಟಿ ಕಂಟ್ರೋಲ್ ರೂಂಗಳಲ್ಲೂ ವೀಕ್ಷಿಸಲಾಗುತ್ತದೆ. ರೈಲು ನಿಲ್ದಾಣಗಳ ಸರ್ವಲನ್ಸ್ ವೀಡಿಯೋ ದೃಶ್ಯಾವಳಿಗಳನ್ನು 30 ದಿನಗಳವರೆಗೆ ಹಾರ್ಡ್ ಡಿಸ್ಕ್‍ನಲ್ಲಿ ಸಂಗ್ರಹಿಸಿಡುವ ವ್ಯವಸ್ಥೆ ಮಾಡಲಾಗಿದ್ದು, ಇದರಿಂದ ಅಪರಾಧ ಪ್ರಕರಣ ತಪ್ಪಿಸುವ ಜತೆಗೆ ರೈಲು ಪ್ರಯಾಣಿಕರ ಸುರಕ್ಷತೆಗೂ ಆದ್ಯತೆ ನೀಡಿದಂತಾಗುತ್ತದೆ ಎಂಬುದು ರೈಲ್ವೆ ಇಲಾಖೆಯ ಉದ್ದೇಶವಾಗಿದೆ.