ನಿರ್ಬಂಧಿತ ಹೆದ್ದಾರಿಯಲ್ಲಿ ವಾಹನಗಳ ಭರಾಟೆ

ಮಡಿಕೇರಿ:  ಭೂ ಕುಸಿತದಿಂದಾಗಿ ತೀವ್ರ ದುರಸ್ತಿ ಗೀಡಾಗಿರುವ ಮಡಿಕೇರಿ-ಜೋಡುಪಾಲ ಹೆದ್ದಾರಿಯಲ್ಲಿ ಸದ್ಯಕ್ಕೆ ಲಘುವಾಹನ ಸೇರಿದಂತೆ ಎಲ್ಲಾ ರೀತಿಯ ವಾಹನಗಳÀ ಸಂಚಾರಕ್ಕೆ ಜಿಲ್ಲಾಧಿಕಾರಿಗಳು ನಿರ್ಬಂಧ ಹೇರಿದ್ದಾರೆ. ಆದರೆ ಜಿಲ್ಲಾಡಳಿತದ ಆದೇಶವನ್ನೂ ಧಿಕ್ಕರಿಸುವಂತೆ ಈಗಲೂ ಅನೇಕ ವಾಹನಗಳು ಈ ರಸ್ತೆಯಲ್ಲಿ ಸಂಚರಿಸಿ ಕಾಮಗಾರಿಗೆ ಅಡ್ಡಿಯುಂಟು ಮಾಡುತ್ತಿದೆ.

ಲಘು ವಾಹನಗಳು ಮಾತ್ರವಲ್ಲ, ಟಿಂಬರ್ ತುಂಬಿದ 10 ಚಕ್ರಗಳ ಲಾರಿಯೊಂದು ಈ ಹೆದ್ದಾರಿಯಲ್ಲಿ ಸಾಗುವ ಮೂಲಕ ಗ್ರಾಮಸ್ಥ ರನ್ನು ಕೆರಳಿಸಿದೆ. ಮದೆನಾಡು ವ್ಯಾಪ್ತಿಯಲ್ಲಿ ಟಿಂಬರ್ ತುಂಬಿದ್ದ 10 ಚಕ್ರಗಳ ಭಾರೀ ಲಾರಿಯನ್ನು ತಡೆಹಿಡಿದ ಗ್ರಾಮಸ್ಥರು ಪ್ರತಿಭಟನೆಗೆ ಮುಂದಾದರು. ಈ ಸಂದರ್ಭ ಸ್ಥಳಕ್ಕಾಗಮಿಸಿದ ಜೆಡಿಎಸ್ ಮುಖಂಡ ಡಾ.ಮನೋಜ್ ಬೋಪಯ್ಯ ಗ್ರಾಮಸ್ಥರಿಗೆ ಬೆಂಬಲ ನೀಡಿ ಪೊಲೀಸರನ್ನು ಸ್ಥಳಕ್ಕೆ ಬರುವಂತೆ ಒತ್ತಾಯಿಸಿದರು.

ವಿಷಯ ಅರಿತ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಚೇತನ್ ಪ್ರತಿಭಟನಾ ಸ್ಥಳಕ್ಕೆ ಬಂದು ಗ್ರಾಮಸ್ಥರ ಮನವೊಲಿಸುವ ಪ್ರಯತ್ನ ಮಾಡಿದರು. ಬಸ್ ಸಂಚಾರಕ್ಕೆ ಈ ರಸ್ತೆಯಲ್ಲಿ ಅವಕಾಶ ನೀಡದೇ ಟಿಂಬರ್ ತುಂಬಿದ ಲಾರಿಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ಕಲ್ಪಿಸಿರುವುದರ ವಿರುದ್ದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಟಿಂಬರ್ ತೆರವುಗೊಳಿಸಲು ಜಿಲ್ಲಾಧಿಕಾರಿ ನೀಡಿರುವ ಆದೇಶದ ಬದಲಿಗೆ ಟಿಂಬರ್ ತುಂಬಿಸಿಕೊಂಡು ಲಾರಿಗಳಲ್ಲಿ ಟಿಂಬರ್ ವ್ಯಾಪಾರಿಗಳು ಸಾಗಾಣೆಗೆ ಮುಂದಾಗಿದ್ದಾರೆ ಎಂದು ಗ್ರಾಮಸ್ಥರು ತಮ್ಮ ಅಸಮಾಧಾನ ಹೊರಹಾಕಿದರು. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿದ ಗ್ರಾಮಸ್ಥರು ಯಾವುದೇ ಕಾರಣಕ್ಕೂ ಲಾರಿ, ಕಂಟೈನರ್ ಸೇರಿದಂತೆ ಭಾರೀ ವಾಹನಗಳನ್ನು ರಸ್ತೆ ಕಾಮಗಾರಿ ಮುಕ್ತಾಯವಾಗುವವರೆಗೆ ಈ ಹೆದ್ದಾರಿಯಲ್ಲಿ ಸಂಚಾರಕ್ಕೆ ಬಿಡದಂತೆ ಒತ್ತಾಯಿಸಿದ್ದು, ಪೊಲೀಸರು ಟಿಂಬರ್ ಲಾರಿಯನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.