ಕಡ್ಡಾಯ ವರ್ಗಾವಣೆ ರದ್ಧತಿಗೆ ಆಗ್ರಹಿಸಿ ಪ್ರೌಢಶಾಲಾ ಶಿಕ್ಷಕರ ಪ್ರತಿಭಟನೆ

ಮೈಸೂರು,ಜು.24(ಎಂಟಿವೈ)- ಅವೈಜ್ಞಾನಿಕ ಕಡ್ಡಾಯ ವರ್ಗಾವಣೆ ಪದ್ದತಿ ರದ್ದು ಗೊಳಿಸಿ, ಪರಸ್ಪರ ಮತ್ತು ಕೋರಿಕೆ ವರ್ಗಾವಣೆಗೆ ಅವಕಾಶ ಮಾಡಿ ಕೊಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ಆಶ್ರಯದಲ್ಲಿ ಮೈಸೂರು ಜಿಲ್ಲೆಯ ಪ್ರೌಢ ಶಾಲಾ ಶಿಕ್ಷಕರು ಪ್ರತಿಭಟನೆ ನಡೆಸಿದರು.

ಮೈಸೂರಿನ ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿಯ ಮುಂಭಾಗ ಬುಧ ವಾರ ಪ್ರತಿಭಟನೆ ನಡೆಸಿದ ಶಿಕ್ಷಕರು, ಬೇರಾವುದೇ ಇಲಾಖೆಯಲ್ಲಿ ಇಲ್ಲದ ವರ್ಗಾ ವಣೆ ನೀತಿಯನ್ನು ಶಿಕ್ಷಕರಿಗೆ ಮಾತ್ರ ಜಾರಿಗೆ ತಂದಿದೆ. ಅವೈಜ್ಞಾನಿಕ ವರ್ಗಾ ವಣೆ ಶಿಕ್ಷಕರಿಗೆ ಶಿಕ್ಷೆಯಾಗಿ ಪರಿಣಮಿಸಿದೆ. ಶಿಕ್ಷಕರ ಪಾಲಿಗೆ ಕರಾಳ ಶಾಸನವಾಗಿರುವ ಅವೈಜ್ಞಾನಿಕ ಕಡ್ಡಾಯ ವರ್ಗಾವಣೆ ಪ್ರಕ್ರಿಯೆಯನ್ನು ಕೂಡಲೇ ಸ್ಥಗಿತಗೊಳಿಸ ಬೇಕು. ಕಡ್ಡಾಯ ವರ್ಗಾವಣೆಯು ಶಿಕ್ಷಕ ರನ್ನು ಶೋಷಣೆ ಮಾಡುವ ಹಾಗೂ ಶಿಕ್ಷಿಸುವ ಕಾನೂನಾಗಿ ಮಾರ್ಪಟ್ಟಿದೆ. ಯಾವುದೇ ಅಪರಾಧ ಎಸಗದೆ ಇರುವ ಶಿಕ್ಷಕರ ಪಾಲಿಗೆ ಕಡ್ಡಾಯ ವರ್ಗಾವಣೆ ಒಂದು ಶಾಪವಾಗಿದೆ ಎಂದು ಪ್ರತಿ ಭಟನಾಕಾರರು ಆರೋಪಿಸಿದರು.

ಪತಿ-ಪತ್ನಿ ವಿನಾಯಿತಿ ಪ್ರಕರಣದಲ್ಲಿ ಶಿಕ್ಷಕರಲ್ಲೇ ತಾರತಮ್ಯ ಎಸಗಲಾಗಿದೆ. ಟಿಡಿಎಸ್ ಮಾಹಿತಿ ಅಪೂರ್ಣತೆಯಿಂದ ಕೂಡಿದೆ. ಅವೈಜ್ಞಾನಿಕ ಎಬಿಸಿ ವಲಯ ಗಳನ್ನು ಗುರುತಿಸಿ ಕಡ್ಡಾಯ ವರ್ಗಾವಣೆ ಆರಂಭಿಸಿರುವುದು ಅವೈಜ್ಞಾನಿಕ. ನಿವೃತ್ತಿ ಅಂಚಿನಲ್ಲಿರುವ ಹಿರಿಯ ಶಿಕ್ಷಕರಿಗೆ ಕಡ್ಡಾಯ ವರ್ಗಾವಣೆ ಘೋರ ಶಿಕ್ಷೆ ಯಾಗಿ ಪರಿಣಮಿಸಲಿದ್ದು ಕೂಡಲೇ ಕಡ್ಡಾಯ ವರ್ಗಾವಣೆ ಕೈ ಬಿಟ್ಟು ಶಿಕ್ಷಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಪ್ರೌಢಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಜೆ.ಸಿ.ಶಂಕರ್, ಜಿಲ್ಲಾಧ್ಯಕ್ಷ ರಾಮಪ್ರಸಾದ್, ಸಂಚಾಲಕ ಜಿ.ಜೆ.ಪ್ರಕಾಶ್, ಪ್ರಧಾನ ಸಂಚಾಲಕ ಎಚ್.ಎ.ಹನುಮಂತರಾಜು, ಸಂಚಾಲಕರಾದ ಟಿ.ಸಿ.ಕೃಷ್ಣಮೂರ್ತಿ, ದೇವರಾಜ್, ಶಾರದ, ಉಮಾದೇವಿ, ಯಶೋದ ಸೇರಿ ದಂತೆ ಇನ್ನಿತರರು ಪಾಲ್ಗೊಂಡಿದ್ದರು.