ಸಂಸದ ಪ್ರತಾಪ ಸಿಂಹರಿಂದ ಹತ್ತು ಪಥದ ಹೆದ್ದಾರಿ ಕಾಮಗಾರಿ ಪರಿಶೀಲನೆ

ಮೈಸೂರು:  ಮೈಸೂರು-ಬೆಂಗಳೂರು ಮುಖ್ಯರಸ್ತೆಯ ಕೊಲಂಬಿಯಾ ಏಷಿಯಾ ಆಸ್ಪತ್ರೆಯ ಜಂಕ್ಷನ್‍ನಿಂದ ಟೋಲ್‍ಗೇಟ್‍ವರೆಗೆ ಕೇಂದ್ರ ಸರ್ಕಾರದ ಅನುದಾನದಲ್ಲಿ ನಿರ್ಮಿಸಿರುವ 10 ಪಥದ ರಸ್ತೆಯ ಕಾಮಗಾರಿಯನ್ನು ಶುಕ್ರವಾರ ಸಂಸದ ಪ್ರತಾಪ ಸಿಂಹ ಪರಿಶೀಲಿಸಿ, ರಸ್ತೆ ವಿಭಜಕ ಸೇರಿದಂತೆ ವಿವಿಧೆಡೆ ಇರುವ ನ್ಯೂನತೆಯನ್ನು ಸರಿಪಡಿಸುವಂತೆ ಸೂಚನೆ ನೀಡಿದರು.

ರಿಂಗ್ ರಸ್ತೆಯ ಜಂಕ್ಷನ್‍ನಿಂದ ಪರಿಶೀಲನೆ ಆರಂಭಿಸಿದ ಅವರು ರಸ್ತೆ ವಿಭಜಕದಲ್ಲಿರುವ ನ್ಯೂನತೆ, ನಾಲ್ಕು ರಸ್ತೆಗಳು ಸೇರುವ ಜಂಕ್ಷನ್‍ನಲ್ಲಿ ರಸ್ತೆ ಅಗಲೀಕರಣ ಮಾಡುವ ವೇಳೆ ಎಸಗಿರುವ ದೋಷವನ್ನು ಸರಿಪಡಿಸುವಂತೆ ಸೂಚನೆ ನೀಡಿದರಲ್ಲದೆ, ಕಾಮಗಾರಿಯ ಗುಣಮಟ್ಟ ಹಾಗೂ ಕಾಮಗಾರಿ ನಡೆಸಿರುವ ಔಚಿತ್ವವನ್ನು ಪ್ರಶ್ನಿಸಿ ಅಸಮಾಧಾನ ವ್ಯಕ್ತಪಡಿಸಿದರು.

ಪರಿಶೀಲನೆಯ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸೆಂಟ್ರಲ್ ರೋಡ್ ಫಂಡ್‍ನಿಂದ ಕಳೆದ ವರ್ಷ ಐದು ಕೋಟಿ ರೂ ಬಿಡುಗಡೆಯಾಗಿತ್ತು. ಈ ಹಣದಲ್ಲಿ ಕೊಲಂಬಿಯಾ ಏಷಿಯಾ ಆಸ್ಪತ್ರೆಯ ಜಂಕ್ಷನ್‍ನಿಂದ ಮೈಸೂರು ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು 560 ಮೀಟರ್ ವಿಸ್ತೀರ್ಣದವರೆಗೆ 10 ಪಥದ ರಸ್ತೆಯನ್ನಾಗಿ ಪರಿವರ್ತಿಸಲಾಗಿದೆ. ಈ ಕಾಮಗಾರಿಯ ವೇಳೆ ಕೆಲವು ನ್ಯೂನತೆ ಎದ್ದು ಕಾಣುತ್ತಿವೆ. ಈ ದೋಷವನ್ನು ಸರಿಪಡಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಮುಂದಾಲೋಚನೆಯಿಲ್ಲದೆ ರಸ್ತೆ ಕಾಮಗಾರಿ ನಡೆಸಿರುವುದಕ್ಕೆ ಅಧಿಕಾರಿಗಳನ್ನು ಪ್ರಶ್ನಿಸಿದ್ದೇನೆ. ಸಾರ್ವಜನಿಕರ ಹಣ ಪೋಲಾಗುವಂತೆ ಮಾಡಿದ್ದಾರೆ. ಮೈಸೂರು-ಬೆಂಗಳೂರು ಹೈವೇ ಕಾಮಗಾರಿ ಆರಂಭವಾದರೆ ಕೊಲಂಬಿಯಾ ಏಷಿಯಾ ಆಸ್ಪತ್ರೆಯ ಜಂಕ್ಷನ್‍ನಲ್ಲಿ ಗ್ರೇಡ್ ಸಪರೇಟರ್ ನಿರ್ಮಿಸಲಾಗುತ್ತದೆ. ಇದಕ್ಕೆ ಹೊಸದಾಗಿ ನಿರ್ಮಾಣ ಮಾಡಿರುವ ಈ ರಸ್ತೆಯನ್ನು ಅಗೆದು ಫಿಲ್ಲರ್‍ಗಳನ್ನು ಅಳವಡಿಸಬೇಕಾಗುತ್ತದೆ. ಇದರಿಂದ ಹೊಸದಾಗಿ ನಿರ್ಮಿಸಿರುವ ಈ ರಸ್ತೆ ಬಹುಪಾಲು ಹಾಳಾಗುತ್ತದೆ ಎಂದು ವಿಷಾದಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿಗೆ ಬಂದಿದ್ದಾಗ ಮೈಸೂರು-ಬೆಂಗಳೂರು ಹೈವೆಯನ್ನು 10 ಪಥದ ರಸ್ತೆಯಾಗಿ ಮಾಡುವುದಕ್ಕೆ ಮನವಿ ಮಾಡಿದ್ದೆ. ನನ್ನ ಮನವಿಗೆ ಸ್ಪಂದಿಸಿದ ಪ್ರಧಾನಿಗಳು ಅದೇ ದಿನ ಮೈಸೂರು-ಬೆಂಗಳೂರು ಹೈವೇಯನ್ನು 10 ಪಥದ ರಸ್ತೆಯನ್ನಾಗಿ ಮಾರ್ಪಡಿಸಲು ಘೋಷಣೆ ಮಾಡಿದ್ದರು. ಫೆ.20ರಂದು ಕ್ಯಾಬಿನೆಟ್‍ನಲ್ಲಿ ಅನುಮೋದನೆ ಸಿಕ್ಕಿತ್ತು.

ಮಾರ್ಚ್ 22ರಂದು ಗುದ್ದಲಿ ಪೂಜೆ ನೆರವೇರಿಸಲಾಗಿತ್ತು. ನೈಸ್ ಜಂಕ್ಷನ್‍ನಿಂದ ಮೈಸೂರಿನವರೆಗೆ 7 ಸಾವಿರ ಕೋಟಿ ರೂ ವೆಚ್ಚದಲ್ಲಿ ರಸ್ತೆಯ ಕಾಮಗಾರಿ ನಡೆಯಲಿದೆ. ಕಾಮಗಾರಿಯನ್ನು ಮುಂದಿನ 24 ತಿಂಗಳಲ್ಲಿ ಪೂರ್ಣಗೊಳಿಸಿ, ಸಾರ್ವಜನಿಕರ ಸೇವೆಗೆ ಸಮರ್ಪಿಸಲಾಗುತ್ತದೆ ಎಂದು ಹೇಳಿದ ಅವರು, ಮಾರ್ಗ ಮಧ್ಯೆ ಬಿಡದಿ, ರಾಮನಗರ, ಚೆನ್ನಪಟ್ಟಣ, ಮದ್ದೂರು, ಮಂಡ್ಯ ಹಾಗೂ ಶ್ರೀರಂಗಪಟ್ಟಣ ಈ ಆರು ನಗರಗಳಿಗೂ 55 ಕಿ.ಮೀ. ಬೈಪಾಸ್ ರಸ್ತೆ ಕೊಡುತ್ತೇವೆ. ಬೈಪಾಸ್ ರಸ್ತೆಯೂ 10 ಪಥ ಇರುತ್ತದೆ. 6 ಪಥ ಎಕ್ಸ್‍ಪ್ರೆಸ್ ಹೈವೆಯಾಗಿದ್ದರೆ, ಎರಡು ಬದಿಯಲ್ಲಿಯೂ ಎರಡು ಪಥದ ಸರ್ವಿಸ್ ರಸ್ತೆ ಇರುತ್ತದೆ ಎಂದು ತಿಳಿಸಿದರು.

ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಭೂಮಿ ಸ್ವಾಧೀನ ಕಾರ್ಯ ಪ್ರಗತಿಯಲ್ಲಿದೆ. ಭೂಮಿ ಸ್ವಾಧೀನಕ್ಕೆ ಎರಡು ಪ್ಯಾಕೇಜ್ ಮಾಡಲಾಗಿದೆ. ನಿಡಘಟ್ಟದವರೆಗೆ ಒಂದು ಪ್ಯಾಕೇಜ್, ಅಲ್ಲಿಂದ ಮೈಸೂರುವರೆಗೆ ಮತ್ತೊಂದು ಪ್ಯಾಕೇಜ್ ಘೋಷಿಸಲಾಗಿದೆ. ಭೂಮಿ ನೀಡಿದ ರೈತರಿಗೆ ಎಕರೆಗೆ 38 ಲಕ್ಷದಿಂದ 1.50 ಕೋಟಿವರೆಗೂ ಪರಿಹಾರ ನೀಡಲಾಗಿದೆ. ದೊಡ್ಡ ಪ್ರಮಾಣದಲ್ಲಿ ಪರಿಹಾರ ನೀಡಿರುವುದರಿಂದ ರೈತರು ಭೂಮಿಯನ್ನು ಕೊಟ್ಟು ಸಹಕರಿಸಿದ್ದಾರೆ. ಸೆಪ್ಟೆಂಬರ್ ಎರಡನೇ ವಾರದಿಂದ ಸುಮಾರು 10 ಸ್ಥಳಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಏಕಕಾಲದಲ್ಲಿ ಆರಂಭವಾಗಲಿದೆ. ಈ ರಸ್ತೆ ಅಭಿವೃದ್ಧಿಯಾದರೆ ಸಹಜವಾಗಿ ಮೈಸೂರಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಲಿದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಮೇಯರ್ ಸಂದೇಶ್‍ಸ್ವಾಮಿ, ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಎಇಇ ಚಂದ್ರಪ್ಪ, ಎಇ ತಾರಕೇಶ್, ಬಿಜೆಪಿ ಮುಖಂಡರಾದ ಎಂ.ರಾಜೇಂದ್ರ, ಅಶೋಕ್ ಹಾಗೂ ಇನ್ನಿತರರು ಇದ್ದರು.