ಡಿ. 16ಕ್ಕೆ ಹಿನಕಲ್ ಫ್ಲೈ ಓವರ್ ಉದ್ಘಾಟನೆ

ಮೈಸೂರು: ಮೈಸೂರಿನ ಹಿನಕಲ್ ಬಳಿ ನಿರ್ಮಿಸಿರುವ ಸಾಂಸ್ಕೃತಿಕ ನಗರಿಯ ಮೊದಲ ಫ್ಲೈಓವರ್ ಡಿಸೆಂಬರ್ 16 ರಿಂದ ಸಾರ್ವಜನಿಕರ ಸೇವೆಗೆ ಮುಕ್ತಗೊಳ್ಳಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ಫ್ಲೈಓವರ್ ಅನ್ನು ಭಾನುವಾರ ಬೆಳಿಗ್ಗೆ ಉದ್ಘಾಟನೆ ಮಾಡುವರು ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್‍ಸಿಂಹ ಅವರು `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ಕೇಂದ್ರದ ನರ್ಮ್ ಯೋಜನೆಯಡಿ ಶೇ.60ರಷ್ಟು ಅನುದಾನ, ರಾಜ್ಯ ಸರ್ಕಾರದ ಶೇ.20 ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ಶೇ.20ರಷ್ಟು ಹಣದಿಂದ ನಿರ್ಮಿಸಿರುವ ಫ್ಲೈಓವರ್ ಕಾಮಗಾರಿ ಸಂಪೂರ್ಣ ಗೊಂಡಿದ್ದು, ಬೀದಿ ದೀಪ, ಟ್ರಾಫಿಕ್ ಮಾರ್ಕ್‍ಗಳನ್ನು ಹಾಕಿ ಸುಣ್ಣ-ಬಣ್ಣ ಹೊಡೆದು ಸೌಂದರ್ಯೀಕರಣಗೊಳಿಸಲಾಗಿದೆ. ಕೆಲಸ ಮುಕ್ತಾಯಗೊಂಡಿರು ವುದರಿಂದ ದ್ವಿಚಕ್ರವಾಹನಗಳು ಈಗಾಗಲೇ ಫ್ಲೈಓವರ್ ಮೇಲೆ ಓಡಾಡುತ್ತಿವೆ. ನವೆಂಬರ್ 28ರಂದೇ ಈ ಯೋಜನೆಯನ್ನು ಕೇಂದ್ರ ನಗರಾಭಿವೃದ್ಧಿ ಸಚಿವರು, ಮುಖ್ಯಮಂತ್ರಿಗಳು ಉದ್ಘಾಟನೆ ಮಾಡುವ ಕಾರ್ಯಕ್ರಮ ನಿಗದಿಯಾಗಿತ್ತು. ಕಾರಣಾಂತರಗಳಿಂದ ಅಂದಿನ ಕಾರ್ಯಕ್ರಮವನ್ನು ಡಿಸೆಂಬರ್ 7ಕ್ಕೆ ಮುಂದೂಡಲಾಗಿತ್ತು.

ಆದರೆ ಅಂದು ಅಮಾವಾಸ್ಯೆಯಾದ ಕಾರಣ ಮುಂದೂಡಲಾಗಿತ್ತು. ಇದೀಗ ಕೇಂದ್ರ ಸಚಿವರು ಹಾಗೂ ರಾಜ್ಯದ ಮುಖ್ಯಮಂತ್ರಿಗಳಿಗಾಗಿ ಕಾಯುವುದು ಬೇಡ ಎಂದು ಅಂತಿಮವಾಗಿ ಡಿಸೆಂಬರ್ 16ರ ಭಾನುವಾರಕ್ಕೆ ನಿಗದಿಗೊಳಿಸಲಾಗಿದೆ ಎಂದು ಪ್ರತಾಪ್‍ಸಿಂಹ ಅವರು ನುಡಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದಲ್ಲಿ ನಿರ್ಮಿಸಿರುವುದರಿಂದ ಅದರ ಲಾಭವನ್ನು ಪಡೆದುಕೊಳ್ಳಲು ಆಯಾ ಪಕ್ಷಗಳ ಜನಪ್ರತಿನಿಧಿಗಳು ಮುಂದಾಗಿದ್ದರಿಂದ ಕಾಮಗಾರಿ ಪೂರ್ಣಗೊಂಡರೂ ಹಿನಕಲ್ ರಿಂಗ್ ರಸ್ತೆ ಜಂಕ್ಷನ್ನಿನ ಫ್ಲೈಓವರ್ ಉದ್ಘಾಟನೆ ವಿಳಂಬವಾಯಿತು.