‘ಕಾರಂಜಿಕೆರೆ ಅಭಿವೃದ್ಧಿಗೆ ಸುತ್ತಲ ಹೋಟೆಲ್‍ಗಳೂ ಕೈಜೋಡಿಸಲಿ’

ಕಾರಂಜಿಕೆರೆ ಉತ್ಸವದಲ್ಲಿ ಕೆರೆ ಸಂರಕ್ಷಣೆಗೆ ಸಲಹೆ ನೀಡಿದ ಬಿ.ಪಿ.ರವಿ

ಮೈಸೂರು,ಡಿ.17(ಎಂಟಿವೈ)- ಸಮು ದಾಯದ ಸ್ವತ್ತಾಗಿರುವ ಕೆರೆಗಳ ಸಂರಕ್ಷಣೆಗೆ ಎಲ್ಲರೂ ಪಣ ತೊಡಬೇಕು ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯ ದರ್ಶಿ ಬಿ.ಪಿ.ರವಿ ಮನವಿ ಮಾಡಿದರು.

ಕಾರಂಜಿಕೆರೆ ಉತ್ಸವದಲ್ಲಿ ಕೆರೆಗಳ ಸಂರ ಕ್ಷಣೆಯ ಮಹತ್ವ ಕುರಿತಂತೆ ಮಾತನಾಡಿದ ಅವರು, ಕಾರಂಜಿಕೆರೆ  ಸುತ್ತಮುತ್ತಲ ಪ್ರದೇಶಗಳಿಗೆ ನೀರಿನ ಸೆಲೆಯಾಗಿದೆ. ಪ್ರತ್ಯಕ್ಷ – ಪರೋಕ್ಷವಾಗಿ ಉಪಯೋಗ ಪಡೆದುಕೊಳ್ಳುತ್ತಿರುವ ಮೈಸೂರಿನ ಜನತೆ ಕೆರೆ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಕೊಡುಗೆ ನೀಡಬೇಕು. ಮೃಗಾಲಯದ ಸುತ್ತಮುತ್ತ ಇರುವ 30-40 ಹೋಟೆಲ್, ರೆಸ್ಟೋರೆಂಟ್‍ಗಳು ಮೃಗಾಲಯ ಹಾಗೂ ಕಾರಂಜಿಕೆರೆಯಿಂದ ಲಾಭ ಪಡೆದುಕೊಳ್ಳುತ್ತಿವೆ ಎಂದರು.

ಚಾಮರಾಜೇಂದ್ರ ಮೃಗಾಲಯ ನಿರ್ವಹಣೆಗೆ ಪ್ರತಿದಿನ 5 ಲಕ್ಷ ಲೀಟರ್ ನೀರು ಬೇಕು.  ಪಾಲಿಕೆ ಯಿಂದ ಕೇವಲ 50 ಸಾವಿರ ಲೀಟರ್ ನೀರು ಸರಬರಾಜಾಗುತ್ತಿತ್ತು. ಇದರಿಂದ 4.50 ಲಕ್ಷ ಲೀಟರ್ ನೀರಿನ ಕೊರತೆ ಉಂಟಾಗುತ್ತಿತ್ತು. ಅಗತ್ಯ ಪ್ರಮಾಣದ ನೀರನ್ನು ಬೋರ್‍ವೆಲ್  ಮೂಲಕ ಬಳಸಿಕೊಳ್ಳಲಾಗುತ್ತಿದ್ದು, ಒಮ್ಮೆ ಕೊಳವೆ ಬಾವಿ ಬತ್ತಿ ಹೋದ ಹಿನ್ನೆಲೆಯಲ್ಲಿ ಮೃಗಾ ಲಯಕ್ಕೆ ನೀರಿನ ಕೊರತೆ ಸೃಷ್ಟಿಯಾಯಿತು. ಆನಂತರ ಪರ್ಯಾಯ ವ್ಯವಸ್ಥೆ ಮಾಡಿ ಕೊಳ್ಳಲಾಯಿತು. ಸಮೀಪದಲ್ಲೇ ಕಾರಂಜಿಕೆರೆ ಇದ್ದರೂ ಅಂತರ್ಜಲ ವೃದ್ಧಿಯಾಗಿರಲಿಲ್ಲ ಎಂದು ವಿಷಾದಿಸಿದರು.

ರಾಜ್ಯದಲ್ಲಿ ಅಂದಾಜು 38000 ಕೆರೆಗಳಿವೆ. ಬೆಂಗಳೂರಿನಲ್ಲಿದ್ದ ನೂರಾರು ಕೆರೆಗಳು  ಕಣ್ಮರೆ ಯಾಗಿವೆ. ಒಂದು ಕೆರೆ ಅಭಿವೃದ್ಧಿಪಡಿಸಿದರೆ, ಅದರಿಂದ ಆದಾಯ ಬರುತ್ತದೆ. ಕನಿಷ್ಠ  20ರಿಂದ 30 ಮಂದಿಗೆ ಉದ್ಯೋಗ ದೊರೆಯುತ್ತದೆ. ಪ್ರಸ್ತುತ ಅವುಗಳ ಸ್ವರೂಪ ಬದಲಾಗಿದೆ. ನಗರೀ ಕರಣ ಹಾಗೂ ನಿರ್ವಹಣೆ ಕೊರತೆಯಿಂದಾಗಿ ಬಹಳಷ್ಟು ಕೆರೆಗಳು ಮಲಿನಗೊಳ್ಳುತ್ತಿವೆ ಹಾಗೂ ಹಲವು ಕೆರೆಗಳು ಕಣ್ಮರೆಯಾಗುತ್ತಿವೆ. ಹಲವು ದೇಶಗಳಲ್ಲಿ ಇರುವಂತೆ ನಮ್ಮ ದೇಶದಲ್ಲೂ ಯೂಸ್ ಅಂಡ್ ಪೇ ಪದ್ಧತಿಯನ್ನು ಜಾರಿಗೆ ತರಬೇಕು. ಆಗ ಮಾತ್ರ ಪ್ರಾಕೃತಿಕ ಸಂಪನ್ಮೂಲಗಳಾದ ಕೆರೆಗಳನ್ನು ರಕ್ಷಿಸಬಹುದು ಎಂದು ಅಭಿಪ್ರಾಯಪಟ್ಟರು.

ಕಾರಂಜಿಕೆರೆಯಲ್ಲಿ 45-50 ಪ್ರಭೇದಗಳ ಪಕ್ಷಿ ಸಂಕುಲ ಕಾಣಬಹುದು. ಮೃಗಾಲಯದ ವ್ಯಾಪ್ತಿಗೆ ಬರುವ ತಿಪ್ಪಯ್ಯನ ಕೆರೆಯಲ್ಲಿ 45 ಬಗೆಯ ಪಕ್ಷಿಗಳನ್ನು ಕಾಣಬಹುದು. ಕೆರೆಯನ್ನು ಸಂರಕ್ಷಿ ಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಮೃಗಾ ಲಯಕ್ಕೆ ಕೆರೆ ಮಾಲಿಕತ್ವ ಇನ್ನೂ ನೀಡಿಲ್ಲ. ಮೃಗಾಲಯ ಹಾಗೂ ಕಾರಂಜಿಕೆರೆಯಿಂದ ಬರುವ ಆದಾಯವನ್ನು ತಿಪ್ಪಯ್ಯನ ಕೆರೆ ಸೇರಿದಂತೆ ಇತರ ಕೆರೆಗಳ ಅಭಿವೃದ್ಧಿಗೆ ಬಳಸಲಾಗುತ್ತಿದೆ. ಎಲ್ಲಾ ಅಭಿವೃದ್ಧಿ ಕೆಲಸಗಳು ಸರ್ಕಾರದ ಒಂದರಿಂದಲೇ ಸಾಧ್ಯವಿಲ್ಲ. ಹಾಗಾಗಿ  ಈ ಬಗ್ಗೆ ಕಂದಾಯ ಇಲಾಖೆ ಸ್ಥಳೀಯ ಆಡಳಿತ, ಅರಣ್ಯ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳು, ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಕೆರೆಗಳನ್ನು ಪುನರುಜ್ಜೀವನಗೊಳಿಸಬಹುದು ಎಂದರು.