ಮೈಸೂರಲ್ಲಿ ಮಾಗಿ ಉತ್ಸವ ಅರಮನೆ ಆವರಣದಲ್ಲಿ ಜನಜಾತ್ರೆ:  ಪುಷ್ಪಕಾಶಿಯ ನಡುವೆ ಸಂಭ್ರಮದ ಅಲೆ

ಮೈಸೂರು, ಡಿ.25(ವೈಡಿಎಸ್)-ಮಾಗಿ ಉತ್ಸವದ ಅಂಗವಾಗಿ ಮೈಸೂರು ಅರಮನೆ ಆವರಣದಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, 2ನೇ ದಿನವಾದ ಬುಧವಾರ 45 ಸಾವಿರಕ್ಕೂ ಹೆಚ್ಚು ಮಂದಿ ಪ್ರವಾಸಿಗರು, ಸ್ಥಳೀಯರು ಭೇಟಿ ನೀಡಿ, ವೀಕ್ಷಿಸಿದ್ದಾರೆ.

ಹೊಸ ವರ್ಷದ ಹಿನ್ನೆಲೆಯಲ್ಲಿ ಮೈಸೂರಿಗೆ ವಿಶಿಷ್ಟ ರೀತಿಯಲ್ಲಿ ಪ್ರವಾಸಿಗರನ್ನು ಆಕರ್ಷಿ ಸಲು ಆಯೋಜಿಸಿರುವ ಫಲಪುಷ್ಪ ಪ್ರದರ್ಶನಕ್ಕೆ ಬುಧವಾರ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಹಾಗೂ ಸ್ಥಳೀಯರು ಭೇಟಿ ನೀಡಿ, ನಾನಾ ಬಣ್ಣ-ಬಣ್ಣದ ಹೂವುಗಳಿಂದ ಅಲಂಕರಿಸಿದ್ದ ಕಲಾಕೃತಿಗಳನ್ನು ಕಣ್ತುಂಬಿ ಕೊಂಡರು. ಪ್ರದರ್ಶನದ ಪ್ರಮುಖ ಆಕರ್ಷಣೆಗಳಾದ ಆನೆ ಗಾಡಿ, ಭಾರತದ ವಾಯು ಸೇನಾ, ಭೂಸೇನಾ ಹಾಗೂ ನೌಕಾ ಸೇನೆಗಳ ಮಾದರಿ. ಬೆಂಗಳೂರು ಅರಮನೆ, ಮೈಸೂರು ಹಳೆಯ ಮರದ ಅರಮನೆ. ಉಪಗ್ರಹ ಚಂದ್ರಯಾನ-2. ಧ್ಯಾನದ ಭಂಗಿಯಲ್ಲಿ ವಿವೇಕಾನಂದರು. ಸಿಂಹಾಸನದ ಮೇಲೆ ಕುಳಿತಿರುವ ಶ್ರೀ ಜಯಚಾಮರಾಜ ಒಡೆಯರ್. ನಡೆದಾಡುವ ದೇವರು ಡಾ.ಶಿವಕುಮಾರ ಸ್ವಾಮೀಜಿ, ಶ್ರೀ ಜಯಚಾಮರಾಜ ಒಡೆಯರ್ ಮಾದರಿ. ಬಿಲ್ವಪತ್ರೆ ಮತ್ತು ನಿಂಬೆಹಣ್ಣಿನಿಂದ ನಿರ್ಮಿ ಸಿದ ಅರಮನೆ ತ್ರಿನೇಶ್ವರ ಶಿವಲಿಂಗ, ಕೃಷ್ಣರಾಜ ಒಡೆಯರ್ ರಥದಲ್ಲಿ ಸಾಗುತ್ತಿರುವುದು. ಚಾರಿಯೆಟ್ ಗಾಡಿ ಮಾದರಿ ಸೇರಿದಂತೆ ಹೂವಿನಿಂದ ನಿರ್ಮಿಸಿದ ವಿವಿಧ ಕಲಾಕೃತಿ ಗಳು ಸಾರ್ವಜನಿಕರ ಕಣ್ಮನ ಸೆಳೆದವು. ಹಾಗೆಯೇ ಸಾಂಪ್ರದಾಯಿಕ ಬೊಂಬೆ ಪ್ರದರ್ಶನ, ಶಿವ ಲೀಲಾಮೃತ, ಶ್ರೀರಾಮ ದರ್ಶನಂ ಗೊಂಬೆ, ಭಾರತೀಯ ಗುರು ಪರಂ ಪರೆ ಗೊಂಬೆಗಳ ಪ್ರದರ್ಶನವನ್ನು ವೀಕ್ಷಿಸಿದರು.

ಗಿಜಿಗುಡುತ್ತಿದ್ದ ಆವರಣ: ಮೊದಲೇ ಅರ ಮನೆ ಅಂದ ಸವಿಯಲು ರಜೆ ದಿನಗಳಂದು ಭಾರೀ ಪ್ರಮಾಣದಲ್ಲಿ ಆಗಮಿಸುತ್ತಿದ್ದ ಪ್ರವಾಸಿಗರು, ಸ್ಥಳೀಯರು ಈಗ ಮಾಗಿ ಉತ್ಸವದ ಫಲಪುಷ್ಪ ಪ್ರದರ್ಶನಕ್ಕೆ ದಂಡೇ ಭೇಟಿ ನೀಡಿದ್ದರಿಂದ ಆವರಣ ಪ್ರೇಕ್ಷಕರಿಂದ ಗಿಜಿಗುಡುತ್ತಿತ್ತು. ಸೆಲ್ಫಿ: ಯುವ ಸಮೂಹ ತಮಗಿಷ್ಟವಾದ ಕಲಾಕೃತಿಗಳ ಬಳಿ ಮತ್ತು ಸೆಲ್ಫಿ ಜೋನ್‍ಗಳಲ್ಲಿ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂತಸ ಪಟ್ಟರು.